ಜಿಲ್ಲೆ

ಖಾಸಗಿ ವಾಹನಕ್ಕೆ ಪೊಲೀಸ್ ಲೇಬಲ್ ಅಂಟಿಸಿ ಓಡಾಟ: ಮಹಾರಾಷ್ಟ್ರ ಆರ್​ಟಿಒ ಅಧಿಕಾರಿ ಪತ್ನಿಯ ಕಾರು ಸೀಜ್​

ಬೀದರ್: ಮಹಾರಾಷ್ಟ್ರದ ಸಾರಿಗೆ ಅಧಿಕಾರಿ ಪತ್ನಿಯೊಬ್ಬರು ತಮ್ಮ ಫಾರ್ಚೂನರ್ ಕಾರಿಗೆ ಪೊಲೀಸ್ ಲೇಬಲ್ ಅಂಟಿಸಿ ಓಡಾಡುವ ಮುಖಾಂತರ ಪೊಲೀಸ್​ ಪದ ದುರ್ಬಳಕೆ ಮಾಡಿಕೊಂಡ ಆರೋಪ ಎದುರಾಗಿದೆ.

ಬಸವಕಲ್ಯಾಣ ತಾಲೂಕಿನವರಾದ ಸಂಜಯ ವಾಡಿಕರ್ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯಾಗಿದ್ದಾರೆ. ಅವರ ಪತ್ನಿ ಶಾಲಿನಿ ವಾಡಿಕರ್ ತಮ್ಮ ಫಾರ್ಚೂನರ್ ಕಾರಿನ‌ ಮೇಲೆ ಪೊಲೀಸ್​ ಎಂಬ ನಾಮಫಲಕ ಹಾಕಿ ಬೀದರ್​ ನಗರಕ್ಕೆ ಬರುವಾಗ ಸಿಕ್ಕಿಬಿದ್ದಿದ್ದಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ‌ಪಿಎಸ್​ಐ ಸುನೀಲ್​ಕುಮಾರ್​ ಹಾಗೂ ಪೊಲೀಸ್​ ಸಿಬ್ಬಂದಿಗಳು ನಗರದ ಹರಳಯ್ಯಾ ಚೆಕ್​ಪೋಸ್ಟ್​ ಬಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪರಿಶೀಲನೆ ವೇಳೆ ಶಾಲಿನಿ ವಾಡಿಕರ್ ಮತ್ತು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಪೊಲೀಸ್​ ಪದ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ‌ಕಾರು‌ ವಶಕ್ಕೆ ಪಡೆದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್​)