ಜಿಲ್ಲೆ

ವಾಂತಿ- ಭೇದಿ ಮರುಕಳಿಸದಂತೆ ಎಚ್ಚರಿಕೆ ಇರಲಿ

ರಮೇಶ ಮೇಳಕುಂದಾ

ಚಿಟಗುಪ್ಪ: ವಾಂತಿ-ಭೇದಿ ಉಲ್ಬಣದಿಂದ ಹಲವು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಬೆಳಕೇರಾ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಗೋವಿಂದರೆಡ್ಡಿ ಹಾಗೂ ಜಿಪಂ ಸಿಇಒ ಶಿಲ್ಪಾ ಭೇಟಿ ನೀಡಿ, ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.
ಗ್ರಾಮಸ್ಥರೊಂದಿಗೆ ಘಟನೆ ಕುರಿತು ಸಮಾಲೋಚನೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಗ್ರಾಮದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಸ್ಥರು ಸ್ವಚ್ಛತೆಗೆ ಆದ್ಯತೆ ನೀಡಿ, ಆರೋಗ್ಯ ಇಲಾಖೆಯ ಸಲಹೆ ಪಾಲಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆ ಸ್ವಚ್ಛತೆ ಮತ್ತು ಬಿಸಿ ಊಟ ತಯಾರಿಸುವ ಕೋಣೆ ಪರಿಶೀಲಿಸಿ, ಮಕ್ಕಳೊಂದಿಗೆ ಬಿಸಿ ಊಟ ಸೇವಿಸಿದರು. ಊಟದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ, ತಹಸೀಲ್ದಾರ್ ರವೀಂದ್ರ ದಾಮಾ, ಇಒ ಅಕ್ರಂ ಪಾಶಾ, ಪಿಡಿಒ ಭಾಗ್ಯಜ್ಯೋತಿ ಇತರರಿದ್ದರು.