ಚೇತನ್ ಚಕ್ಕೆರೆ ಬಿಡದಿ
ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪುರಸಭೆ ಪ್ರಯತ್ನಿಸುತ್ತಿದ್ದರೆ, ಪಟ್ಟಣದ ಜನತೆ ಎಲ್ಲೆಂದರಲ್ಲಿ ಬಿಸಾಡುವ ಕಸದಿಂದ ನಿತ್ಯ ತೊಂದರೆಪಡುವಂತಾಗಿದೆ.
ನಿವೇಶನಗಳಲ್ಲಿ ಕಸ ಸುರಿಯಲಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಪಟ್ಟಣ ವ್ಯಾಪ್ತಿಯ ಬೈರಮಂಗಲ ಕ್ರಾಸ್‌ನಿಂದ ಹಾರೋಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಂತೂ ಕಸದ ರಾಶಿ ಬಿದ್ದಿದೆ. ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಸವನ್ನು ಗುಡ್ಡೆ ಹಾಕುತ್ತಿದ್ದಾರೆ. ಇದಲ್ಲದೆ ಪಟ್ಟಣದಿಂದ ನೆಲ್ಲಿಗುಡ್ಡೆಗೆ ಹೋಗುವ ರಸ್ತೆಯ ಪಕ್ಕದಲ್ಲೂ ಕಸದ ರಾಶಿ ಬಿದ್ದಿದೆ. ಮಳೆಯ ಹಿನ್ನೆಲೆಯಲ್ಲಿ ಕಸವನ್ನು ಸರಿಯಾದ ಸಮಯದಲ್ಲಿ ವಿಲೇವಾರಿ ವಾಡಲು ಸಾಧ್ಯವಾಗದಿರುವುದರಿಂದ ಕಸ ಹೆಚ್ಚು ಹೆಚ್ಚು ಶೇಖರಣೆಯಾಗುತ್ತಿದೆ.
ಬೋರ್ಡ್‌ಗಿಲ್ಲ ಕಿಮ್ಮತ್ತು: ಪುರಸಭೆ ವತಿಯಿಂದ 23 ವಾರ್ಡ್‌ಗಳಲ್ಲಿ ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳ ಪಕ್ಕದಲ್ಲಿ ಕಸ ಹಾಕಬೇಡಿ ಎಂದು ಸೂಚನಾ ಫಲಕ ಹಾಕಲಾಗಿದೆ. ಆದರೆ ಫಲಕಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಕಸ ಹಾಕುತ್ತಿದ್ದಾರೆ.
ಎಲ್ಲ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹಿಸುವ ಆಟೋಗಳು ಮನೆ ಬಾಗಿಲಿಗೆ ಹೋಗುತ್ತವೆ. ಆದರೆ ಕೆಲವರು ವಾತ್ರ ಕಸ ಹಾಕುತ್ತಾರೆ. ಇದು ಪುರಸಭೆ ಅಧಿಕಾರಿಗಳಿಗೆ ತಲೆನೋವಾಗಿದೆ. ಪುರಸಭೆಯಲ್ಲಿ 7 ಆಟೋಗಳು ಹಾಗೂ ಒಂದು ಟ್ರ್ಯಾಕ್ಟರ್ ಇದ್ದು, ಪ್ರತಿನಿತ್ಯ ಪ್ರತಿ ರಸ್ತೆಗಳಲ್ಲಿನ ಮನೆಯ ಮುಂದೆ ಸಂಚಾರ ಮಾಡುತ್ತಿದ್ದರೂ ರಸ್ತೆ ಬದಿಗಳಲ್ಲಿ ಕಸ ಬಿಸಾಡುವ ಪ್ರವೃತ್ತಿ ನಿಲ್ಲುತ್ತಿಲ್ಲ.
ನಿಷೇಧದ ಪ್ಲಾಸ್ಟಿಕ್ ಬಳಕೆ: ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಹಲವು ಹೋಟೆಲ್, ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗಳಿಗೆ ಈಗಲೂ ಬಳಸಲಾಗುತ್ತಿದೆ. ಆದರೆ ಇದನ್ನು ತಡೆಯಬೇಕಿರುವ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.
ಪಟ್ಟಣದಲ್ಲಿ ಕಸದ ಸಮಸ್ಯೆ ತಲೆದೋರದಂತೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮುಂಜಾನೆ ಆಟೋಗಳು ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ತೆರಳುತ್ತವೆ. ಇಷ್ಟಾದರೂ ರಸ್ತೆಗಳ ಪಕ್ಕದಲ್ಲಿ ಕಸ ಸುರಿಯುವ ಪ್ರವೃತ್ತಿ ನಿಲ್ಲುತ್ತಿಲ್ಲ. ಕಡಿವಾಣ ಹಾಕಬೇಕಾದರೆ ದಂಡದ ಅಸ್ತ್ರ ಪ್ರಯೋಗಿಸಬೇಕು.
ಅಮರ್ ನಾಥ್, ಪುರಸಭೆ ಮುಖ್ಯಾಧಿಕಾರಿ
-
ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ನಾವು ಆಟೋಗಳ ಮೂಲಕ ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ತೆರಳುತ್ತೇವೆ. ಮನೆಗಳಲ್ಲಿ ನೀಡುವ ಕಸವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿಕೊಳ್ಳುತ್ತೇವೆ. ಇಷ್ಟಾದರೂ ರಸ್ತೆಯ ಇಕ್ಕೆಲಗಳಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದಾಗಿ ನಾವು ಎರಡೆರಡು ಬಾರಿ ಕಸ ತೆಗೆಯಲು ಹೋಗಬೇಕಿದೆ. ಅಧಿಕಾರಿಗಳು ಕಸ ಹಾಕುವವರನ್ನು ಪತ್ತೆ ಹಚ್ಚಿ ದಂಡ ಹಾಕಿದರೆ ಮಾತ್ರ ಮುಕ್ತಿ ಸಿಗುತ್ತದೆ.
ಅನಿಲ್‌ರಾಜ್, ಪುರಸಭೆ ಪೌರಕಾರ್ಮಿಕರ ಮೇಸ್ತ್ರಿ