raichur 
ಜಿಲ್ಲೆ

ಬೈಸಿಕಲ್ ದಿನಾಚರಣೆ : ತಿರಂಗ ಸೈಕಲ್ ಜಾಥಾಕ್ಕೆ ಚಾಲನೆ

ರಾಯಚೂರು ಇತ್ತಿಚ್ಚಿನ ದಿನಗಳಲ್ಲಿ ಜನರಲ್ಲಿ ಮಾನಸಿಕ ಖಿನ್ನತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೈಸಿಕಲ್ ತುಳಿಯುವ ಹವ್ಯಾಸ ಬೆಳೆಸಿಕೊಂಡರೆ ದೈಹಿಕವಾಗಿ ಸದೃಢರಾಗುವುದರ ಜತೆಗೆ ಮಾನಸಿಕ ಆರೋಗ್ಯವನ್ನೂ ಪಡೆಯಬಹುದೆಂದು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಯಚೂರು ಬೈಸಿಕಲ್ ಕ್ಲಬ್ ವತಿಯಿಂದ ಫಿಟ್ ಇಂಡಿಯಾ ಕಾರ್ಯಕ್ರಮದಡಿ ಭಾನುವಾರ ವಿಶ್ವ ಬೈಸಿಕಲ್ ದಿನಾಚರಣೆಯ ನಿಮಿತ್ತ ತಿರಂಗ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್19 ಬಳಿಕ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹಲವು ಕಾಯಿಲೆಗಳಿಂದ ನರಳುವಂತಾಗಿದೆ.

ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿರುವ ಯುವಜನತೆ ಸೈಕಲ್ ಸವಾರಿಯನ್ನು ಮರೆತುಬಿಟ್ಟಿದೆ. ಕಾರು, ಬೈಕ್ ಸವಾರಿ ವ್ಯಾಮೋಹದ ನಡುವೆ ಸೈಕಲ್ ಮೂಲೆ ಸೇರಿದೆ. ಆರೋಗ್ಯದ ದೃಷ್ಟಿಯಿಂದ ಸೈಕಲ್‌ಗೆ ಮತ್ತೆ ಬೇಡಿಕೆ ಸೃಷ್ಟಿಯಾಗಿದೆ. ಸಾರ್ವಜನಿಕರು ದಿನದ ಒಂದೆರಡು ಗಂಟೆಗಳನ್ನು ಸೈಕಲ್ ಸವಾರಿಗೆ ಮೀಸಲಿಡಬೇಕು. ಇದರಿಂದ ಉತ್ತಮ ಆರೋಗ್ಯವೂ ಸಿಗುತ್ತದೆ. ಮನಸ್ಸಿಗೂ ಉಲ್ಲಾಸವಾಗುತ್ತದೆ.

ಬೆಳಗಿನ ಸೈಕಲ್ ಸವಾರಿಯಿಂದ ಪ್ರಕೃತಿಯೊಂದಿಗೆ ಆಪ್ತವಾಗಿ ಬೆರೆಯಬಹುದು. ಹಕ್ಕಿಗಳ ಚಿಲಿಪಿಲಿ ಆಲಿಸಬಹುದು. ಬೆಳಗಿನ ಆಹ್ಲಾದಕರ ವಾತಾವರಣ ಹಾಗೂ ಶುದ್ಧ ಗಾಳಿ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಸೈಕಲ್ ತುಳಿದರೆ ಆಲಸ್ಯ ದೂರವಾಗಿ ಇಡೀ ದಿನ ಉತ್ಸಾಹದಿಂದ ಇರಬಹುದು ಎಂದರು.

ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ 07.15ರ ಹೊತ್ತಿಗೆ ಆರಂಭವಾದ ರ‌್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲ್ಿ ಸುಮಾರು 5-6 ಕಿ.ಮೀ ಸಾಗಿ ಸಮಾಪನಗೊಂಡಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಮಾನಂದ ಎಸ್.ಘೋಡಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ,ಡಾ. ರಾಜಣ್ಣ, ಡಾ.ಸಂಗಣ್ಣ , ಬೆಲ್ಲಂ ಕಿರಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.