ರಾಯಚೂರು: ಕರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಬಿಸಿಯೂಟ ಕಾರ್ಮಿಕರಿಗೆ ಆರ್ಥಿಕ ನೆರವು, ಸೇವೆ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ತಾಲೂಕು ಸಮಿತಿ ಮನವಿ ಸಲ್ಲಿಸಿತು.
ನಗರದ ಡಿಸಿ ಕಚೇರಿಯ ಸ್ಥಾನಿಕ ಅಧಿಕಾರಿ ಪ್ರಭಾವತಿ ಮೂಲಕ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಅಕ್ಷರ ದಾಸೋಹ ಯೋಜನೆಯಲ್ಲಿ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದ ಸುಮಾರು 1.18 ಲಕ್ಷ ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ದುಡಿಯುತ್ತಿದ್ದಾರೆ.
ನೌಕರರು ಕೆಲಸ ಇಲ್ಲದೆ ಅತ್ಯಂತ ಕಡಿಮೆ ವೇತನಕ್ಕಾಗಿ ಸರ್ಕಾರದ ಯೋಜನೆಯಡಿ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು, ವಲಸೆ ಬಂದ ಜನರಿಗೆ ಅಡುಗೆ ಮಾಡಲು ಯಾವುದೇ ಭದ್ರತೆಯಿಲ್ಲದೆ ಊಟ ಬಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಂತವರ ನೆರವಿಗೆ ರಾಜ್ಯ ಸರ್ಕಾರ ಬರುವುದು ಅಗತ್ಯ. ಕೆಲಸ ಕಾಯಂ ಮಾಡಬೇಕು, ಕರೊನಾ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಮಿಕರಿಗೆ ಸರ್ಕಾರದಿಂದ ಸುರಕ್ಷತೆ ಸಾಮಗ್ರಿ, ಪರಿಹಾರಗಳನ್ನು ಒದಗಿಸಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಪ್ರವೇಶ ಶುಲ್ಕ ಮತ್ತಿತರ ಶುಲ್ಕಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಸಮಿತಿ ತಾಲೂಕು ಗೌರವಾಧ್ಯಕ್ಷ ಡಿ.ಎಸ್. ಶರಣಬಸವ, ಅಧ್ಯಕ್ಷೆ ನಾಗಮ್ಮ , ಪದಾಧಿಕಾರಿಗಳಾದ ಅಕ್ಕಮಹಾದೇವಿ, ಕಲ್ಯಾಣಮ್ಮ ಇದ್ದರು.