ಸಂತೆ ಶಿವರದ ಅಯ್ಯನಕೆರೆಗೆ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಚಿತಾಭಸ್ಮವನ್ನು ಮಕ್ಕಳಾದ ರವಿ ಶಂಕರ್, ಉದಯಶಂಕರ್ ಪೂಜೆ ಸಲ್ಲಿಸಿ ಗಂಗೆಗೆ ವಿಸರ್ಜಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ, ಮುಖಂಡರಾದ ಪಟೇಲ್ ರಾಜಣ್ಣ, ಅನಂತಯ್ಯ, ನಾಗರಾಜು, ಜಿರಂಜೀವಿ, ರಾಜು, ವೇಣುಗೋಪಾಲ್, ಮಧು ಪಟೇಲ್ ಇತರರು ಇದ್ದರು. 
ಜಿಲ್ಲೆ

ಹುಟ್ಟೂರಿನಲ್ಲಿ ಭೈರಪ್ಪ ಚಿತಾಭಸ್ಮ ವಿಸರ್ಜನೆ

ವಸಂತಕುಮಾರ್ ಬಿ

ನುಗ್ಗೇಹಳ್ಳಿ: ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಚಿತಾಭಸ್ಮವನ್ನು ಭಾನುವಾರ ಹುಟ್ಟೂರು ಸಂತೆ ಶಿವರದ ಅಯ್ಯನಕೆರೆಗೆ ವಿಸರ್ಜಿಸಲಾಯಿತು.

ಮೈಸೂರಿನಿಂದ ಆಗಮಿಸಿದ ಭೈರಪ್ಪ ಅವರ ಮಕ್ಕಳಾದ ಉದ್ಯಮಿ ರವಿಶಂಕರ್ ಹಾಗೂ ಉದಯ ಶಂಕರ್ ಅವರು ಊರಿನ ಮುಂಭಾಗ ಕೆಂಪಮ್ಮ ದೇಗುಲದ ಮುಂಭಾಗದ ಏರಿ ಮೇಲೆ ಹಿಂದು ಸಂಪ್ರದಾಯದಂತೆ ವೈದಿಕ ಕ್ರಿಯಾಕಾರ್ಯ ನಡೆಸಿದರು. ಬಳಿಕ ಗಂಗಾಧರೇಶ್ವರ ಸ್ವಾಮಿ ದೇಗುಲದ ಹತ್ತಿರದ ಸೋಪಾನದಲ್ಲಿ ಚಿತಾಭಸ್ಮಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರ ಸಮ್ಮುಖದಲ್ಲಿ 3 ದೋಣಿಯ ತೆಪ್ಪದಲ್ಲಿ ವಿಸರ್ಜಿಸಲಾಯಿತು.

ಈ ವೇಳೆ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಇದ್ದರು.

ಬಳಿಕ ಹಿರಿಯ ಮಗ ಉದ್ಯಮಿ ರವಿಶಂಕರ್ ಮಾತನಾಡಿ, ನಮ್ಮ ತಂದೆಗೆ ಮರುಜನ್ಮ ಕಲ್ಪಿಸಿದಂತಹ ಪುರಾಣ ಪ್ರಸಿದ್ಧ ಐತಿಹಾಸಿಕ ಗಂಗಾಧರೇಶ್ವರ ಸ್ವಾಮಿ ದೇಗುಲವನ್ನು ತಮ್ಮ ತಂದೆಯ ಕೊನೇ ಆಸೆಯಂತೆ ಜೀರ್ಣೋದ್ಧಾರ ಮಾಡಲಾಗುವುದು. ಇದಕ್ಕೆ ಶಾಸಕರು, ನನ್ನ ತಮ್ಮ ಉದಯ್‌ಶಂಕರ್ ಹಾಗೂ ಗ್ರಾಮಸ್ಥರು ಕೈ ಜೋಡಿಸಲಿದ್ದಾರೆ ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಡಾ.ಎಸ್.ಎಲ್.ಭೈರಪ್ಪ ಹೆಸರಿನ ಕಲೆ ಮತ್ತು ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಬೇಕಾದ 4 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಸಂತೆ ಶಿವರ ಹಾಗೂ ಚನ್ನರಾಯಪಟ್ಟಣದಲ್ಲಿ ಭೈರಪ್ಪ ಅವರ ಸ್ಮಾರಕಗಳನ್ನು ನಿರ್ಮಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಜತೆಗೆ ಸಂತೆ ಶಿವರದಲ್ಲಿ ಭೈರಪ್ಪ ಹೆಸರಿನ ಅತ್ಯಾಧುನಿಕ ಡಿಜಿಟಲ್ ಮಾದರಿ ಗ್ರಂಥಾಲಯ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಡಾ.ಎಸ್.ಎಲ್. ಭೈರಪ್ಪ ಅವರಿಗೆ ಮರಣೋತ್ತರ ಜ್ಞಾನಪೀಠ ಪ್ರಶಸ್ತಿ ನೀಡುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತೇನೆ. ಪುರಾಣ ಪ್ರಸಿದ್ಧ ಗಂಗಾಧರೇಶ್ವರ ಸ್ವಾಮಿ ದೇಗುಲಕ್ಕೆ ರೂ. 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎಂದರು.

ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಸರ್ಕಾರದಿಂದ ಭೈರಪ್ಪನವರ ಹುಟ್ಟೂರಿನಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಭೈರಪ್ಪನವರ ಕಾದಂಬರಿಗಳು 42 ಭಾಷೆಗಳಿಗೆ ಅನುವಾದವಾಗಿವೆ. ಕೆಲವು ಕಾದಂಬರಿಗಳು ಮನುಷ್ಯನ ಜೀವನ ತಿದ್ದುವಂತಹ ಕಥೆಗಳನ್ನು ಒಳಗೊಂಡಿವೆ. ಇವರು ನಮ್ಮ ದೇಶ ಮೆಚ್ಚುವಂತಹ ಕಾದಂಬರಿಕಾರರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪಟೇಲ್ ರಾಜಣ್ಣ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾಗರಾಜ್, ಶಿಕ್ಷಕ ವೇಣು ಗೋಪಾಲ್, ಉದ್ಯಮಿ ಯೋಗೇಶ್, ಗ್ರಾಮದ ಮುಖಂಡರಾದ ಚಿರಂಜೀವಿ, ಅನಂತಯ್ಯ, ಪ್ರಭಾಕರ್, ರಾಜು, ಮಾಜಿ ಪ್ರಧಾನ ವೀರೇಶ್, ಗ್ರಾಪಂ ಸದಸ್ಯರಾದ ಮಧು ಪಟೇಲ್, ಕೃಷ್ಣ, ಕುಳ್ಳೇಗೌಡ, ಜೈಲಿಂಗೇಗೌಡ, ಬಸವರಾಜ್, ರವೀಶ್, ಗ್ರಾಮಸ್ಥರು ಇತರರು ಹಾಜರಿದ್ದರು.