ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಚಂದ್ರಕಾಂತ ನಗರೆ, ಲಕ್ಷ್ಮಣ ಚಡಚಣ, ರಂಜಾನ್ ಕೊಂಕಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಭುವನೇಶ್ವರಿ ಮೇಡಂ ಹೇಳ್ಯಾರ ರೊಕ್ಕ ಹಾಕ್ರಿ.....ಲಂಚದ ಹಣಕ್ಕಾಗಿ ಆಶಾಗಳಿಗೆ ವಾಯಿಸ್ ಮೆಸೇಜ್...ಅಬ್ಬಬ್ಬಾ ಏನಿದು ಆರೋಗ್ಯ ಇಲಾಖೆ ಅವಾಂತರ?

ವಿಜಯಪುರ: ‘ಭುವನೇಶ್ವರಿ ಮೇಡಂ ಹೇಳ್ಯಾರ ಯಾರಿಗೆಲ್ಲ 5600 ರೂಪಾಯಿ ಜಮಾ ಆಗ್ಯಾದ ಅವರು 600 ರೂಪಾಯಿ ಫೋನ್ ಪೇ ಮಾಡ್ರಿ, ಯಾರಿಗೆ ಜಮಾ ಆಗಿಲ್ಲ ಅಂಥವರು ನಿಮ್ಮ ನಿಮ್ಮ ಹೆಸರು ಬರೆದು ವಾಟ್ಸಪ್‌ಗೆ ಹಾಕ್ರಿ, ಇವತ್ತು ಜಮಾ ಆದವರು ಮಾತ್ರ 600 ರೂಪಾಯಿ ಕೊಡಲೇಬೇಕು...’

ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಈ ಸಂದೇಶ ಆಶಾ ಕಾರ್ಯಕರ್ತೆಯರಿಗೆ ನೀಡಿದ ಸಂಬಳಕ್ಕೆ ಪ್ರತಿಯಾಗಿ ಪಡೆಯುವ ಲಂಚದ ಕುರಿತಾದದ್ದು ಎನ್ನಲಾಗಿದ್ದು, ಸ್ಪಷ್ಟೀಕರಣ ನೀಡಬೇಕಾದ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗಾಢನಿದ್ರೆಗೆ ಜಾರಿದ್ದಾರೆ. ಹೀಗಾಗಿ ಕರ್ನಾಟಕ ರಾಷ್ಟ್ರ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಮನವಿ ಸಲ್ಲಿಸುವ ಮೂಲಕ ತನಿಖೆಗೆ ಆಗ್ರಹಿಸಿದ್ದಾರೆ.

ಏನಿದು ಪ್ರಕರಣ?

ಇಂಡಿ ಹಾಗೂ ಚಡಚಣ ತಾಲೂಕು ಆಶಾ ಕಾರ್ಯತೆರ್ಯರಿಗೆ ವೇತನ ನೀಡಿದ್ದಕ್ಕಾಗಿ ಮೇಲ್ವಿಚಾರಕಿ ಗೀತಾ ಎನ್ನುವರ ಮೂಲಕ ಭುವನೇಶ್ವರ ಬಗಲಿ 600 ರೂಪಾಯಿ ಲಂಚ ಕೇಳಿದ್ದು, ಈ ಕುರಿತ ವಾಯಿಸ್ ರೆಕಾರ್ಡ್ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಈ ಲಂಚದ ಹಣ ತಾಲೂಕು ಆರೋಗ್ಯ ಅಧಿಕಾರಿಗೆ ನೀಡಬೇಕಿದೆ ಎಂಬ ಅಂಶ ಧ್ವನಿ ಸಂದೇಶದಲ್ಲಿ ಉಲ್ಲೇಖಗೊಂಡಿದೆ.

ಆಶಾ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆ. ಕೈಗೆ ಸಿಗುವ ಅಲ್ಪ ಹಣದಲ್ಲಿಯೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ವಾಟ್ಸಪ್ ಧ್ವನಿ ಸಂದೇಶ ಹರಿದಾಡುತ್ತಿದೆ. ಇದರ ಹಿಂದೆ ಇರುವ ಅಧಿಕಾರಿಗಳು ಹಾಗೂ ಮೇಲ್ವಿಚಾರಕಿಯರು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಗೀತಾ ಹಾಗೂ ಭುವನೇಶ್ವರಿ ಎಂಬುವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ಎಫ್‌ಐಆರ್ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಕೆಆರ್‌ಎಸ್ ಮುಖಂಡರಾದ ಚಂದ್ರಕಾಂತ ನಗರೆ ಹಾಗೂ ಲಕ್ಷ್ಮಣ ಚಡಚಣ ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ

ಗೀತಾ ಹಾಗೂ ಭುವನೇಶ್ವರಿ ಬಗಲಿ ಎಂಬುವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು. ಒಂದು ವರ್ಷದ ಸ್ಟೇಟ್‌ಮೆಂಟ್ ಪರಿಶೀಲಿಸಬೇಕು. ಈ ಪ್ರಕರಣದ ಹಿಂದೆ ತಾಲೂಕು ಆರೋಗ್ಯ ಅಧಿಕಾರಿಯಿಂದ ಹಿಡಿದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳವರೆಗೂ ಕೈವಾಡವಿರುವ ಸಂಶಯವಿದೆ. ಜಿಲ್ಲಾದ್ಯಂತ ಈ ರೀತಿ ಲಂಚ ಪಡೆಯುತ್ತಿರುವ ಗುಮಾನಿ ಇದೆ. ಮಾತ್ರವಲ್ಲ, ಗುತ್ತಿಗೆ ನೌಕರರು, ಕಾಯಂ ಸಿಬ್ಬಂದಿಯಿಂದಲೂ ಲಂಚ ಪಡೆಯಲಾಗುತ್ತಿದೆ ಎಂಬ ಆಪಾದನೆ ಇದೆ. ಹೆಸರು ಹೇಳಲು ಹಿಂಜರಿಯುವ ಸಿಬ್ಬಂದಿ ಮೌನವಾಗಿಯೇ ಶೋಷಣೆ ಸಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೆಆರ್‌ಎಸ್ ಪಕ್ಷದ ಪ್ರಮುಖರಾದ ರಂಜಾನ್ ಕೊಂಕಣಿ, ಕಾಂತು ಬಂಡೇವಾಡ, ಪ್ರಕಾಶ ಸಬರದ ಮತ್ತಿತರರು ಆಗ್ರಹಿಸಿದ್ದಾರೆ.