ಸಕಲೇಶಪುರ ಪುರಸಭೆ ಕಚೇರಿಯ ಮುಖ್ಯಾಧಿಕಾರಿ ಕೊಠಡಿಗೆ ಶುಕ್ರವಾರ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದರಿಂದ ಭಾಗಶಃ ಸುಟ್ಟು ಹೋಗಿರುವ ದಾಖಲೆ, ಪತ್ರಗಳು. 
ಜಿಲ್ಲೆ

ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿ ಕೊಠಡಿಗೆ ಬೆಂಕಿ ಹಚ್ಚಿದ ಭೂಪ!

ಸಕಲೇಶಪುರ: ಪಟ್ಟಣ ಪುರಸಭೆ ಕಚೇರಿಯ ಮುಖ್ಯಾಧಿಕಾರಿ ಕೊಠಡಿಗೆ ಶುಕ್ರವಾರ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಸಂಜೆ 4 ಗಂಟೆಯಲ್ಲಿ ಪುರಸಭೆ ಕಚೇರಿಗೆ ಬಂದ ವ್ಯಕ್ತಿ ಯಾರೂ ಇಲ್ಲದ ಸಮಯ ನೋಡಿ ಮುಖ್ಯಾಧಿಕಾರಿ ಕೊಠಡಿಗೆ ನುಗ್ಗಿ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ. ಕಚೇರಿ ಕೊಠಡಿಯಿಂದ ಹೊಗೆ ಬರುತ್ತಿದ್ದನ್ನು ಕಂಡ ಸಿಬ್ಬಂದಿ ತಕ್ಷಣ ನೀರು ಹಾಕಿ ಬೆಂಕಿ ನಂದಿಸಿ ಅನಾಹುತ ತಡೆದಿದ್ದಾರೆ. ಕೆಲ ದಾಖಲೆ ಪತ್ರಗಳು ಸುಟ್ಟು ಕರಕಲಾಗಿದೆ.

ಕುಡಿದ ಅಮಲಿನಲ್ಲಿ ಮಧ್ಯಾಹ್ನದಿಂದ ಕಚೇರಿ ಆವರಣದಲ್ಲಿ ಮುಖ್ಯಾಧಿಕಾರಿಗೆ ನಿಂದಿಸುತ್ತಿದ್ದ ವ್ಯಕ್ತಿಯೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ತಂಡ ತರಬೇತಿ ಪ್ರವಾಸಕ್ಕೆ ಗೋವಾಕ್ಕೆ ಹೋಗಿದ್ದು ಯಾರೂ ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ಕಡತಗಳು ಅಲ್ಪ ಪ್ರಮಾಣದಲ್ಲಿ ಸುಟ್ಟಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.