ಕೆ.ಎಂ.ದೊಡ್ಡಿಯಿಂದ ಆಲಭುಜನಹಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು. ಎ.ಎಸ್.ರಾಜೀವ್, ಸೌಭಾಗ್ಯಾ ರಾಮಣ್ಣ, ಪುಟ್ಟರಾಮು, ರವಿಚಂದ್ರ, ಅಣ್ಣೂರು ಚಂದ್ರಶೇಖರ, ಪಿಣ್ಣಸತೀಶ್ ಇತರರು ಇದ್ದರು.  
ಜಿಲ್ಲೆ

ಮದ್ದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭ

ನಾಗೇಶ ಎಸ್

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಕ್ಷೇತ್ರದ ಜನತೆಯ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕೆ.ಎಂ.ದೊಡ್ಡಿಯಿಂದ ಆಲಭುಜನಹಳ್ಳಿ, ವರೆಗೆ 2.20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಆಗಬೇಕಿದ್ದ ಕೆಲಸಗಳಿಗೆ ನನ್ನ ಅವಧಿಯಲ್ಲಿ ಚಾಲನೆ ನೀಡುತಿದ್ದೇನೆ ಎಂದರು.

ಸರ್ಕಾರದ ವಿವಿಧ ಇಲಾಖೆಗಳಿಂದ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ನಾನು ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಅನೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಮಾಡಿಸಿಕೊಡುವಂತೆ ಮನವಿ ಮಾಡಿದ ಮೇರೆಗೆ ಕಳೆದ ಮೂರು, ನಾಲ್ಕು ತಿಂಗಳಿಂದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದರು.

ಭಾರತೀನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇರುವುದರಿಂದ ಆಲಭುಜನಹಳ್ಳಿ ರಸ್ತೆಯಲ್ಲಿ ವಾಹನ ದಟ್ಟಣೆ ಇದ್ದು, ರಸ್ತೆ ಸಂಪೂರ್ಣವಾಗಿ ಅದ್ವಾನಗೊಂಡಿದೆ. ಈ ಹಿನ್ನೆಲೆಯಲ್ಲಿ ಆಲಭುಜನಹಳ್ಳಿ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಗುಣಮಟ್ಟದ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮದ್ದೂರು-ಮಳವಳ್ಳಿ ಹೆದ್ದಾರಿ ಮೂಲಕ ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರವೇಶ ಮಾಡುವ ಬಸ್‌ಗಳು ಹೊರಗೆ ಹೋಗಲು ಸ್ವಲ್ಪ ಸಮಸ್ಯೆ ಎದುರಾಗುತ್ತಿದೆ. ಎದುರಿನಿಂದ ಮತ್ತೊಂದು ಬಸ್ ಬಂದಾಗ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ತಪ್ಪಿಸಲು ಪಶು ಆಸ್ಪತ್ರೆಯ ಖಾಸಗಿ ಕಟ್ಟಡದವರನ್ನು ತೆರವುಗೊಳಿಸಲು ಮಾಲೀಕರ ಮನವೊಲಿಸಲಾಗುವುದು. ಇದರಿಂದ ಬಸ್ ನಿಲ್ದಾಣದಿಂದ ಒಳಗೆ ಬಂದಂತಹ ಬಸ್‌ಗಳು ಸುಗಮವಾಗಿ ಹೊರಗೆ ಹೋಗಲು ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾ.ಪಂ ಅಧ್ಯಕ್ಷೆ ಸೌಭಾಗ್ಯಾ ರಾಮಣ್ಣ, ಸದಸ್ಯರಾದ ಪುಟ್ಟರಾಮು, ರವಿಚಂದ್ರ, ಅಣ್ಣೂರು ಚಂದ್ರಶೇಖರ, ಪಿಣ್ಣಸತೀಶ್, ಮುಖಂಡರಾದ ಮೆಣಸಗೆರೆ ಪ್ರಕಾಶ್, ತೊರೆಬೊಮ್ಮನಹಳ್ಳಿ ವೆಂಕಟೇಶ್, ಯಲಾದಹಳ್ಳಿ ನಿಂಗೇಗೌಡ, ಆಲಭುಜನಹಳ್ಳಿ ಪ್ರಸನ್ನ ಸೇರಿದಂತೆ ಹಲವರಿದ್ದರು.