ಮೈಸೂರಿನ ಕೆ.ಆರ್. ವನಂನಲ್ಲಿ ಗುರುವಾರ ಅಖಿಲ ಭಾರತ ಮಾಧ್ವ ಮಹಾಮಂಡಲ ಮೈಸೂರು ಶಾಖೆಯ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಟಿ.ಎಸ್. ಶ್ರೀವತ್ಸ, ಜಗನ್ನಾಥ ಶೆಣೈ ಹಾಗೂ ಇತರರು ಇದ್ದರು.  
ಜಿಲ್ಲೆ

ಮೈಸೂರಿನ ಮಾಧ್ವ ವಿದ್ಯಾರ್ಥಿ ನಿಲಯಕ್ಕೆ ಭೂಮಿಪೂಜೆ

ಮೈಸೂರು: ಅಖಿಲ ಭಾರತ ಮಾಧ್ವ ಮಹಾಮಂಡಲ ಮೈಸೂರು ಶಾಖೆಯ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಕೃಷ್ಣಮೂರ್ತಿಪುರಂ ಬಳಿಯ ಕೆ.ಆರ್. ವನಂನಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಬ್ರಾಹ್ಮಣರು ಶಾಸ್ತ್ರಾಧ್ಯಾಯನ ಮಾಡುವುದರ ಜತೆಗೆ ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ನಾನಾ ಕಾರಣದಿಂದಾಗಿ ಶಾಸ್ತ್ರಾಧ್ಯಾಯನ ಮಾಡಲು ಸಾಧ್ಯವಾಗದೆ ಇದ್ದರೆ ಕನಿಷ್ಠ ಗಾಯತ್ರಿಮಂತ್ರಾನುಷ್ಠಾನವಾದರೂ ಮಾಡಬೇಕು. ಅದನ್ನೂ ತಪ್ಪಿಸಿಕೊಂಡರೆ ಬ್ರಾಹ್ಮಣರು ಅಂದುಕೊಳ್ಳಲು ಯಾವ ಅರ್ಹತೆಯೂ ಉಳಿಯುವುದಿಲ್ಲ ಎಂದರು.

ದೂರದ ಊರುಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳ ಅನುಕೂಲಕೋಸ್ಕರ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುತ್ತಿದ್ದೇವೆ. ಈ ನಿಲಯ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಆಶೀರ್ವಾದದಿಂದ ವಿದ್ಯಾರ್ಥಿ ನಿಲಯ ಶೀಘ್ರದಲ್ಲೇ ಸುಸಜ್ಜಿತವಾಗಿ ನಿರ್ಮಾಣಗೊಳ್ಳುವ ವಿಶ್ವಾಸವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ದೊರೆಯಬೇಕು. ಉತ್ತಮ ಸಂಸ್ಕಾರ ದೊರೆತರೆ ನಮ್ಮ ಹಿಂದೂ ಸಮಾಜಕ್ಕೆ ಉತ್ತಮ ನಾಯಕರು ದೊರೆಯುತ್ತಾರೆ. ಆ ಮೂಲಕ ನಮ್ಮ ದೇಶ ವಿಶ್ವಗುರು ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಸುಸಂಸ್ಕೃತ ವಿದ್ಯಾರ್ಥಿ ನಿಲಯ ತಯಾರಿ ಮಾಡುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಮಾತನಾಡಿ, ವಿದ್ಯೆ ಬಲ್ಲವನಿಗೆ ಲೋಕದ ಎಲ್ಲ ಕಡೆ ಮಾನ್ಯತೆ ದೊರೆಯುತ್ತದೆ. ವಿದ್ಯೆಗೆ ಅಷ್ಟೊಂದು ಮಹತ್ವ ಇದೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಕಲಿಯಲು ಉತ್ತಮ ವಾತಾವರಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಿದ್ಯಾರ್ಥಿ ನಿಲಯಕ್ಕೆ ಶಾಸಕರ ನಿಧಿಯಿಂದ 30 ಲಕ್ಷ ರೂ ಹಾಗೂ ವೈಯಕ್ತಿಕವಾಗಿ 2 ಲಕ್ಷ ರೂ. ನೀಡುತ್ತೇನೆ. ನಮ್ಮ ಧರ್ಮ ಉಳಿಸಲು ಸಂಧ್ಯಾವಂದನೆ ಮಾಡಬೇಕು. ಸಂಧ್ಯಾವಂದನೆ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ನಿಲಯಕ್ಕೆ ಪ್ರವೇಶಾವಕಾಶ ಕಲ್ಪಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಕಲಿಯಲು ಹಲವರು ಆಸಕ್ತಿ ತೋರುತ್ತಿರುವುದು ಸಂತಸದ ಸಂಗಿತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು. ಈ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಧರ್ಮದ ಆಚರಣೆಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ಮಾಧ್ವ ಮಹಾಮಂಡಲ ಮೈಸೂರು ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ನಿಲಯದ ಅಧ್ಯಕ್ಷ ಪಿ.ಜಿ. ಸತ್ಯಪ್ರಕಾಶ್, ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್. ತಂತ್ರಿ, ಕಟ್ಟಡ ಸಮಿತಿ ಅಧ್ಯಕ್ಷ ಆರ್. ವಾಸುದೇವ ಭಟ್ ಹಾಗೂ ಇತರರು ಇದ್ದರು.