ವಿಜಯವಾಣಿ ಸುದ್ದಿಜಾಲ ನಂದಗುಡಿ
ರಾಜ್ಯದಲ್ಲಿ ನಡೆಯುತ್ತಿರುವ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರ ಒಲವು ಕಾಂಗ್ರೆಸ್ ಪರವಾಗಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷ ಸೋಲು ಅನುಭವಿಸುವುದು ಗ್ಯಾರಂಟಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ಹೆತ್ತಕ್ಕಿ ಗ್ರಾಪಂ ವ್ಯಾಪ್ತಿಯ ಬಂಡಹಳ್ಳಿಯಲ್ಲಿ ಕೆಆರ್‌ಐಡಿಎಲ್ ಯೋಜನೆ ಅನುಷ್ಠಾನದಡಿಯಲ್ಲಿ 1.05 ಕೋಟಿ ರೂ. ವೆಚ್ಚದ ಗಣಿಗಾರಿಕೆ ನಡೆಸಿದ್ದ ಕಂದಕಗಳಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಯಶಸ್ವಿಯಾಗಿ ಆಡಳಿತ ನೀಡುತ್ತಿದ್ದು, ಜನಪರ ಆಡಳಿತಕ್ಕೆ ದೇಶದಲ್ಲೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಪಚುನಾವಣೆಯಲ್ಲಿ ರಾಜ್ಯದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸುವುದರ ಜತೆಗೆ 2028ರ ಸಾರ್ವತ್ರಿಕ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದರು.
ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಮೂಲ ಸೌಕರ್ಯಗಳಿಗೆ ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಸಮುದಾಯ ಭವನ, ಕುಡಿಯುವ ನೀರು, ಚರಂಡಿಗಳ ನಿರ್ಮಾಣ, ಶಾಲಾ-ಕಾಲೇಜುಗಳ ನಿರ್ಮಾಣ ಮಾಡುವ ಸಲುವಾಗಿ ವಿಶೇಷ ಅನುದಾನಗಳನ್ನು ಬಳೆಸಿಕೊಂಡು ಸರ್ವತೋಮುಖ ಅಭಿವೃದ್ಧಿಯ ಕೆಲಸಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ, ಮಾದರಿ ಕ್ಷೇತ್ರವನ್ನಾಗಿಸುವುದೇ ಧ್ಯೇಯವಾಗಿದೆ ಎಂದರು.
ಈ ಭಾಗದಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆ ಗಣಿಗಾರಿಕೆ ನಡೆಸಿ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿರುತ್ತಿದೆ. ದನಕರುಗಳು, ಜನರು ಕಾಲು ಜಾರಿ ಬಿದ್ದು ಪ್ರಾಣ ಹಾನಿ ಸಂಭವಿಸಿದೆ ಎಂದು ಮನವಿ ಸಲ್ಲಿಸಿದ್ದರಿಂದ ಜೀವ ಹಾನಿಯನ್ನು ತಡೆಯಲೆಂದು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷರಾದ ಬಿ.ಎಂ. ಮುನಿರಾಜು, ಪವಿತ್ರಾ ಮಂಜುನಾಥ್, ಉಪಾಧ್ಯಕ್ಷೆ ಕಲ್ಪನಾ ಚನ್ನಕೃಷ್ಣಪ್ಪ, ಮಾಜಿ ಅಧ್ಯಕ್ಷ ಆರ್. ರವಿಕುಮಾರ್ ಮಾಜಿ ಉಪಾಧ್ಯಕ್ಷ ಜಗದೀಶ್, ಸದಸ್ಯ ಎನ್.ಎನ್.ಮಂಜುನಾಥ್, ಮುಖಂಡರಾದ ಶಿವಣ್ಣ, ಬಾಣಮಾಕನಹಳ್ಳಿ ರಮೇಶ್, ಯಳಚಹಳ್ಳಿ ದೇವರಾಜು, ಗುತ್ತಿಗೆದಾರ ಕುಮಾರ್ ಇದ್ದರು.