ಕಲಬುರಗಿ: ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ವಯೋವೃದ್ಧೆ ಮೇಲೆ ಹಲ್ಲೆ ಮಾಡಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಂಧಿಸಿ, ಗಲ್ಲಿಗೆ ಏರಿಸುವಂತೆ ಆಗ್ರಹಿಸಿ ನಗರದಲ್ಲಿ ಶ್ರೀ ಸಿದ್ಧರಾಮೇಶ್ವರ ಭೋವಿ ವಡ್ಡರ್ ಸಂಘದಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಅತ್ಯಾಚಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿದರು.
ಇಡೀ ಸಮಾಜವೇ ತಲೆ ತಗ್ಗಿಸುವಂತ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ದಲಿತ ಭೋವಿ ಸಮಾಜದ ೮೦ ವರ್ಷ ವೃದ್ಧೆಯ ಮೇಲೆ ಅತ್ಯಾಚಾರ ಇಡೀ ಸಮಾಜಕ್ಕೆ ಕಳಂಕ ತರುವಂತ್ತದ್ದು. ಒಬ್ಬಳೆ ಇದ್ದ ವೃದ್ಧೆ ಮೇಲೆ ಕಾಮುಕ ತಯ್ಯಬ್ ಫಕೀರ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಕಳ್ಳತನ ಮಾಡಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವಿಕೃತ ಕಾಮಿ ತಯ್ಯಬ್ ಫಕೀರ್‌ನ ಬಂಧಿಸಿ, ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ದೌರ್ಜನ್ಯಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ವೃದ್ಧ ಮಹಿಳೆಗೆ ಸರ್ಕಾರ ಸೂಕ್ತ ಚಿಕಿತ್ಸೆ ನೀಡಿ, ಪರಿಹಾರ ಘೋಷಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಿಎಂಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಸಂಸ್ಥಾಪಕ ಅಧ್ಯಕ್ಷ ರವಿಚಂದ್ರ ಗುತ್ತೇದಾರ, ಭಾರತೀಯ ಯುವ ಸೈನ್ಯದ ಅಧ್ಯಕ್ಷ ರಾಜು ಸುರಪುರ, ಹಣಮಂತ ಜಾಧವ್, ಹೀರಾ ಮಂಜುಳಕರ, ತಿಮ್ಮಯ್ಯ ದೇವಕರ, ಲಕ್ಷö್ಮಣ ಕೋಡ್ಲಿ, ಮಂಜುನಾಥ ಸಿಂಗೆ, ಅಕ್ಷಯ (ಯಂಕಪ್ಪ), ಬಸವರಾಜ ದಂಡಗುಲಕರ್, ಅನೀಲಕುಮಾರ ಮಂಜುಳಕರ್, ಮಂಜುನಾಥ ಸಿಂಗೆ, ಅರ್ಜುನ ಸಿರನೂರ, ದುರ್ಗಪ್ಪ ನಿಂಬರ್ಗಾ, ರಫೀಕ್ ಪಟೇಲ್, ವಿಠಲ್ ಕಟ್ಟಿಮನಿ, ಪಂಡಿತ್ ದೇವಕರ್, ಮಲ್ಲೇಶ ಕಲಗುರ್ತಿ, ಗೌತಮ ಹದನೂರ, ಗಣೇಶ ಕಟ್ಟಿಮನಿ ಇತರರಿದ್ದರು.