ಮೈಸೂರು: ಶ್ರೀವ್ಯಾಸರಾಜ ಮಠದ (ಸೋಸಲೆ)ದಿಂದ ನಗರದ ಹೊರ ವಲಯ ಶ್ರೀನಗರದಲ್ಲಿ ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಯಿತು.
ದಡದಹಳ್ಳಿ ಮಾರ್ಗದಲ್ಲಿರುವ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿದ್ಯಾಪೀಠಕ್ಕೆ ಶ್ರೀವಿದ್ಯಾಶ್ರೀಶ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.
ತಾವು ಸ್ಥಾಪಿಸಿದ ಶ್ರೀವ್ಯಾಸತೀರ್ಥ ವಿದ್ಯಾಪೀಠಕ್ಕೆ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಬಯಕೆ ಹೊಂದಿದ್ದು. ಅದರಂತೆ, ಶ್ರೀನಗರದಲ್ಲಿ 3 ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಇದೀಗ ಬಹು ದಿನಗಳ ಕನಸಿನಂತೆ ಕಟ್ಟಡ ತಲೆ ಎತ್ತಲಿದೆ. 40 ಮಕ್ಕಳು ಈಗ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸದ್ಯ ಕೃಷ್ಣಮೂರ್ತಿಪುರಂನಲ್ಲಿರುವ ಮಠದಲ್ಲೇ ತರಗತಿ ನಡೆಯುತ್ತಿದೆ ಎಂದು ಶ್ರೀಗಳು ಹೇಳಿದರು.
ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅಂದಾಜಿಸಲಾಗಿದೆ. ಪಾಠಶಾಲೆ, ಆಧುನಿಕ ಸೌಕರ್ಯಗಳನ್ನು ಒಳಗೊಂಡ ವಿದ್ಯಾರ್ಥಿನಿಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸಂಶೋಧನಾ ಕೇಂದ್ರ, ಭವ್ಯ ಸಭಾಂಗಣ, ಸಂಸ್ಕೃತ ಪಾಠಶಾಲೆ, ಯಾಗಶಾಲೆ, ಅಧ್ಯಾಪಕರ ವಸತಿಗೃಹ, ಆಟದ ಮೈದಾನ, ಗೋಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗಲಿವೆ ಎಂದು ವಿವರಿಸಿದರು.
ದೇವರ ಅನುಗ್ರಹ ಮತ್ತು ಭಕ್ತರ ಸಹಕಾರದಲ್ಲಿ ಸನಾತನ ವಿದ್ಯೆ ಪ್ರಸಾರದ ಕೇಂದ್ರಕ್ಕೆ ನೆಲೆ ಕಲ್ಪಿಸುವ ಕೆಲಸ ಆರಂಭವಾಗಲಿದೆ. ಗುರು ಪೂರ್ಣಿಮಾ ದಿನ ಇದಕ್ಕೆ ಸಾಕ್ಷಿ ಆಗಿದೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ.ಮಧುಸೂದನ್ ಆಚಾರ್ಯ ಇತರರು ಇದ್ದರು.