ಜಿಲ್ಲೆ

ಅ.೧೭ ರಂದು ಗಾಂಧೀಜಿಯವರ ಸ್ಮಾರಕ ಉದ್ಯಾನ ನಿರ್ಮಾಣಕ್ಕೆ ಭೂಮಿ ಪೂಜೆ

ಮಡಿಕೇರಿ: ನಗರದ ಗಾಂಧಿ ಮಂಟಪದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂಬಂಧ ಶಾಸಕ ಡಾ.ಮಂತರ್ ಗೌಡರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಯಿತು.


ನಗರದ ಸುದರ್ಶನ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್ ಇತರರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿದರು.


ಈಗಾಗಲೇ ಸರ್ಕಾರದಿಂದ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ೫೦ ಲಕ್ಷ ರೂ. ಬಿಡುಗಡೆಯಾಗಿದ್ದು, ಮಹಾತ್ಮ ಗಾಂಧೀಜಿಯವರ ಚಿತಾ ಭಸ್ಮವಿಟ್ಟು ಶಾಶ್ವತವಾದ ಸ್ಮಾರಕ ಉದ್ಯಾನವನ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಅ.೧೭ ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ ನೆರವೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.


ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಿಸುವಲ್ಲಿ ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಹೊಸ ತಂತ್ರಜ್ಞಾನದಂತೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು. ಜೊತೆಗೆ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಶಾಸಕ ಡಾ.ಮಂತರ್ ಗೌಡ ಸೂಚಿಸಿದರು.


ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನವನ ನಿರ್ಮಾಣ ಸಂಬಂಧ ಯೋಜನೆಯಂತೆ ಕಾಮಗಾರಿ ಕೈಗೊಳ್ಳುವಂತೆ ಸಲಹೆ ಮಾಡಿದರು.


ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾತನಾಡಿ, ಈಗಾಗಲೇ ೫೦ ಲಕ್ಷ ರೂ. ಬಿಡುಗಡೆಯಾಗಿದ್ದು, ಗಾಂಧಿ ಸ್ಮಾರಕ ಉದ್ಯಾನವನ ಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.


ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್ ಇತರರು ಹಲವು ಮಾಹಿತಿ ನೀಡಿದರು.