ಗದಗ: ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಡೀ ವರ್ಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದಲೇ ಚಾಲನೆ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಭಾನವಾರು ಆಯೋಜಿಸಿದ್ದ ಭಾರತರತ್ನ ಪಂ. ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಂಗ ಮಂದಿರ ನಿರ್ಮಾಣದಲ್ಲಿ ನಮ್ಮ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದೆ. ಪ್ರತಿ ಜಿಲ್ಲೆಯಲ್ಲಿ ಇಂತಹ ರಂಗಮಂದಿರಗಳನ್ನು ನಿರ್ಮಾಣ ಮಾಡುವ ವಿಚಾರವಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗ ಮಂದಿರಕ್ಕೆ ಪಂ. ಭೀಮಸೇನ ಜೋಶಿ ಹೆಸರು ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ಗದಗ ಜಿಲ್ಲೆಯ ಇತಿಹಾಸ ಹಾಗೂ ಪ್ರಸಿದ್ಧಿಯನ್ನು ಅಳಿಯದಂತೆ ಉಳಿಸಲು ಪುಸ್ತಕ ರಚಿಸಬೇಕು ಎಂದು ಸಲಹೆ ನೀಡಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಜಿಲ್ಲಾಧಿಕಾರಿ ವಶಾಲಿ.ಎಂ.ಎಲ್, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಇತರರು ಇದ್ದರು.