ಮುಂಡರಗಿ: ಪಟ್ಟಣದ ಕಲ್ಲಿನ ಗುಡ್ಡದ ಮೇಲೆ ಸ್ವಾತಂತ್ರೃಪೂರ್ವದ ಹಲವಾರು ಐತಿಹಾಸಿಕ ಕುರುಹುಗಳಿವೆ. ಇವುಗಳೆಲ್ಲ ಈಗ ವಿನಾಶದ ಅಂಚಿನಲ್ಲಿದ್ದು, ಪುರಾತತ್ವ ಇಲಾಖೆ ಹೆಚ್ಚಿನ ಸಂಶೋಧನೆ ನಡೆಸುವುದರೊಂದಿಗೆ ಸಂರಕ್ಷಣೆಗೆ ಮುಂದಾಗಬೇಕಿದೆ.
ಪಟ್ಟಣದ ಕಲ್ಲಿನ ಗುಡ್ಡದ ಮೇಲೆ ದೊಡ್ಡ ಕೋಟೆ ಇದ್ದು, ಅದನ್ನು ಸುವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಗುಡ್ಡವು ಸುಮಾರು 250 ಅಡಿ ಎತ್ತರವಿದ್ದು, ಗುಡ್ಡವನ್ನು ಉತ್ತರ- ದಕ್ಷಿಣ ಹಾಗೂ ಪಶ್ಚಿಮ ಭಾಗದಿಂದ ಮೇಲಕ್ಕೆ ಹತ್ತುವುದು ಅಸಾಧ್ಯ. ಪೂರ್ವ ದಿಕ್ಕಿನಲ್ಲಿ ಹತ್ತಿಳಿಯಲು ಅನುಕೂಲವಾಗಿದೆ. ಗುಡ್ಡದ ಮೇಲೆ ಆರು ಕಾವಲು ಗೋಪುರ ಮತ್ತು ರಕ್ಷಣಾ ಗೋಡೆಗಳಿವೆ.
ಗೋಡೆಗಳಿಗೆ ಹೊಂದಿಕೊಂಡಂತೆ ಪೂರ್ವ ಮತ್ತು ದಕ್ಷಿಣದಲ್ಲಿ ದ್ವಾರ ಬಾಗಿಲುಗಳಿವೆ. ಕೋಟೆಯ ಒಳಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯವಿದ್ದು, ಅದರ ಹಿಂಭಾಗದಲ್ಲಿ ನೂರೊಂದು ಶಿವಲಿಂಗಗಳನ್ನು ಹಾಸುಗಲ್ಲಿನ ಮೇಲೆ ಕೆತ್ತಲಾಗಿದೆ. ನೀರಿನ ಅನುಕೂಲಕ್ಕಾಗಿ ಹೊಂಡ ನಿರ್ಮಿಸಲಾಗಿದೆ. ಕೋಟೆಯ ಕೆಳಭಾಗದಲ್ಲಿ ಶ್ರೀ ಲಕ್ಷ್ಮೀ ಕನಕನರಸಿಂಹ ದೇವಸ್ಥಾನ ಮತ್ತು ಆಂಜನೇಯ ದೇವಾಲಯಗಳಿವೆ. ಗುಡ್ಡದ ಕೆಳಭಾಗದಲ್ಲಿ ಕೋಟೆಯ ರಕ್ಷಣಾ ಗೋಡೆ, ಕಾವಲು ಗೋಪುರ, ದ್ವಾರಬಾಗಿಲುಗಳು ಮತ್ತು ಚಾವಡಿಗಳಿದ್ದವು.
17-18ನೇ ಶತಮಾನದಲ್ಲಿ ಈ ಕೋಟೆ ನಿರ್ಮಾಣವಾಗಿರಬಹುದು ಎಂದು ಊಹಿಸಲಾಗಿದೆ. ಕೋಟೆಗೆ ಸ್ವಾತಂತ್ರ್ಯ ಹೋರಾಟಗಾರ ಭೀಮರಾಯನ ಕೋಟೆ ಎನ್ನಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಕಲಕೇರಿ ಸಂಸ್ಥಾನದ ಆಳ್ವಿಕೆಗೆ ಮುಂಡರಗಿ ಒಳಪಟ್ಟಿತ್ತು ಎನ್ನಲಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕೋಟೆಯಂಥ ಐತಿಹಾಸಿಕ ಕುರುಹುಗಳು ಕಂಡುಬರುತ್ತವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಮೂಲಕ ಇಲ್ಲಿನ ಐತಿಹಾಸಿಕ ಸಂಗತಿಗಳನ್ನು ಹೊರತರಲು ಮುಂದಾಗಬೇಕಿದೆ.
ಏನೇನಾಗಿದೆ?
*ಕೋಟೆ ಕಾವಲು ಗೋಪುರಗಳು ಕುಸಿಯುತ್ತಿವೆ
*ಕೋಟೆ ಸುತ್ತಲಿನ ರಕ್ಷಣಾ ಗೋಡೆ ಶಿಥಿಲ
*ಎರಡು ಕಾವಲು ಗೋಪುರ ನೆಲಸಮ
*ಒಳಭಾಗದ ಕಟ್ಟಡಗಳು ಧರೆಗುರುಳಿವೆ
*ನೀರಿನ ಹೊಂಡ ಪಾಚಿಗಟ್ಟಿದೆ
*ಹಾಸುಗಲ್ಲಿನ ಮೇಲಿನ ಶಿವಲಿಂಗಗಳಲ್ಲಿ ಕೆಲವು ಭಗ್ನ
ವಿಜಯನಗರ ಅರಸರ ಕಾಲದ ಅಪರೂಪದ ಶಿವಲಿಂಗಗಳು ಕೋಟೆಯ ಗುಡ್ಡದಲ್ಲಿವೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಾಸನವಿದ್ದು, ಅದರಲ್ಲಿ ಎಲ್ಲ ವೃತ್ತಿ ಮಾಡುವ ಸಮುದಾಯದ ಹೆಸರುಗಳಿವೆ. 17- 18ನೇ ಶತಮಾನದಲ್ಲಿ ಕೋಟೆ ನಿರ್ಮಾಣವಾಗಿದೆ. ಕೋಟೆ ಸಂರಕ್ಷಿಸುವುದರೊಂದಿಗೆ ಸಂಶೋಧನೆ ಕೈಗೊಂಡರೆ ಹೆಚ್ಚಿನ ಐತಿಹಾಸಿಕ ವಿಷಯ ತಿಳಿದುಬರುತ್ತದೆ. ಈ ಐತಿಹಾಸಿಕ ಸ್ಮಾರಕವನ್ನು ಹೊರಜಗತ್ತಿಗೆ ಪರಿಚಯ ಮಾಡಬೇಕಿದೆ.ಡಾ. ವನಜಾಕ್ಷಿ ಭರಮಗೌಡರಸಹಾಯಕ ಪ್ರಾಧ್ಯಾಪಕಿ, ಮುಂಡರಗಿ
ಮುಂಡರಗಿ ಕಲ್ಲಿನ ಗುಡ್ಡದ ಕೋಟೆಯು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿಲ್ಲ. ಇದನ್ನು ಸಂರಕ್ಷಿತ ಸ್ಮಾರಕ ಪಟ್ಟಿಯೊಳಗೆ ಸೇರ್ಪಡೆ ಮಾಡಿದರೆ ರಕ್ಷಣೆ ಹಾಗೂ ಅಭಿವೃದ್ಧಿ ಪಡಿಸಬಹುದು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.ರಾಜಾರಾಮ್ ಬಿ.ಸಿ., ಪ್ರಾಚ್ಯವಸ್ತು ಇಲಾಖೆ ಅಧಿಕಾರಿ, ಗದಗ