ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಡೆಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿವೆ. ವಿಶೇಷವೆಂದರೆ, ಕಳೆದ ಬಾರಿಯ ದಸರಾದಲ್ಲಿ ಭಾಗಿಯಾಗಿ ಎಲ್ಲರ ಆಕರ್ಷಣೆಯಾಗಿದ್ದ ‘ಮಹೇಂದ್ರ’ ಮತ್ತು ‘ಭೀಮ’ ಆನೆಗಳು ಈ ಬಾರಿಯೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಈ ಎರಡು ಆನೆಗಳ ಪೈಕಿ ಒಂದು ಗಜಪಡೆಯ ನಾಯಕನಾಗುವ ಮುನ್ಸೂಚನೆ ಕಂಡುಬರುತ್ತಿದೆ.
ಕಳೆದ ವರ್ಷ (2022) ಮೊದಲ ತಂಡದಲ್ಲಿ ಭಾಗಿಯಾಗಿದ್ದ ಆನೆಗಳಲ್ಲಿ ‘ಭೀಮ’ ಅತ್ಯಂತ ಕಿರಿಯ ಪ್ರಾಯದವನಾಗಿದ್ದ. ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಮೂರನೇ ಬಾರಿಗೆ ಭಾಗಿಯಾಗಲು ಸಿದ್ಧವಾಗುತ್ತಿರುವ ಭೀಮ, 2017ರ ದಸರಾದಲ್ಲೂ ಪಾಲ್ಗೊಂಡಿದ್ದ. 23ರ ಹರೆಯದ ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾನೆ. ಸದ್ಯ 2.87 ಮೀ. ಎತ್ತರ, 3.05 ಮೀ. ಉದ್ದ ಮತ್ತು 3,500 ಕೆ.ಜಿ. ತೂಕವಿರುವ ಈ ಆನೆಯ ದಂತ, ದೇಹ ರಚನೆ ಉತ್ತಮವಾಗಿದ್ದು, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ.
ಕಳೆದ ವರ್ಷ ಮೊದಲ ಬಾರಿಗೆ ‘ಮಹೇಂದ್ರ’ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ. 40 ವರ್ಷದ ಮಹೇಂದ್ರ ಕೂಡ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾನೆ. ಸದ್ಯ 2.74 ಮೀ. ಎತ್ತರ, 3.25 ಮೀ. ಉದ್ದ ಮತ್ತು 3,150 ಕೆ.ಜಿ. ತೂಕ ಇದ್ದಾನೆ.
ಆದ್ದರಿಂದ ಭವಿಷ್ಯದಲ್ಲಿ ಈ ಎರಡು ಆನೆಗಳಲ್ಲಿ ಒಂದು ‘ಗಜಪಡೆಯ ಕ್ಯಾಪ್ಟನ್’ ಆಗಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಎರಡೂ ಆನೆಗಳು ಈ ಬಾರಿ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಂತಿಮವಾಗಿ 14 ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
‘ಭೀಮ’ನ ಹಿನ್ನೆಲೆ ಕರುಣಾಜನಕವಾಗಿದೆ. 2001ರಲ್ಲಿ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ವಲಯದ ಭೀಮನಕಟ್ಟೆಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ 6 ತಿಂಗಳ ಮರಿ ಆನೆ, ಅಮ್ಮನ ಅಗಲಿಕೆಯ ನೋವಿನೊಂದಿಗೆ ವಾರಗಟ್ಟಲೆ ಕಾಡಿನಲ್ಲಿ ಸುತ್ತಾಡುತ್ತಿತ್ತು. ಈ ನಡುವೆ, ಒಂದು ದಿನ ಕಾಡಿಗೆ ಮೇಯಲು ಹೋಗಿದ್ದ ದನಗಳ ಜತೆ ಅದು ಭೀಮನಕಟ್ಟೆ ಬಳಿ ಇರುವ ಅಳ್ಳೂರು ಗ್ರಾಮವನ್ನು ಪ್ರವೇಶಿಸಿತು. ಇದರಿಂದ ಸಂಭ್ರಮಗೊಂಡ ಗ್ರಾಮಸ್ಥರು ಆನೆ ಮರಿಗೆ ಪೂಜೆ ಮಾಡಿ, ಊರಿನಲ್ಲಿ ಮೆರವಣಿಗೆ ಮಾಡಿದ್ದರು. ನಂತರ ಮತ್ತಿಗೋಡು ಅರಣ್ಯ ಇಲಾಖೆ ಕಚೇರಿಗೆ ಕರೆದೊಯ್ದು ಒಪ್ಪಿಸಿದ್ದರು.
ಮಗನಂತೆ ಸಾಕಿದ ಕುಳ್ಳರಾಮ:
ಆನೆಗಳ ಲಾಲನೆ, ಪಾಲನೆ ಮತ್ತು ಪಳಗಿಸುವಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಮಾವುತ ಕುಳ್ಳರಾಮಗೆ ಅರಣ್ಯ ಅಧಿಕಾರಿಗಳು ಮರಿ ಆನೆಯ ಜವಾಬ್ದಾರಿ ವಹಿಸಿದರು. ನಂತರ ಕುಳ್ಳರಾಮ ಅವರೇ ಇದಕ್ಕೆ ‘ಭೀಮ’ ಎಂದು ನಾಮಕರಣ ಮಾಡಿ, ತನ್ನ ಮಗನಂತೆಯೇ ಸಾಕಿದರು. ಅದೇ ಸಮಯದಲ್ಲಿ ಸುಮಾರು 6 ಮರಿ ಆನೆಗಳು ಕಾಡಿನಲ್ಲಿ ಸಿಕ್ಕಿದ್ದವು. ಆದರೆ, ತಾಯಿಹಾಲು ಸಿಗದ ಕಾರಣ ಅವುಗಳೆಲ್ಲ ಸತ್ತುಹೋದವು. ಆದರೆ ಆ ಪೈಕಿ ಉಳಿದವನೇ ‘ಭೀಮ’. ಈತನನ್ನು ಕುಳ್ಳರಾಮ ದಂಪತಿ ಚೆನ್ನಾಗಿ ಸಾಕಿದರು.
10 ವರ್ಷಗಳಿಂದ ರಾಧಾಕೃಷ್ಣ ಎಂಬುವರು ಈ ಆನೆಯನ್ನು ಸಲಹುತ್ತಿದ್ದರು. ಕಳೆದ ವರ್ಷವಷ್ಟೇ ಭೀಮನಿಗೆ ಗುಂಡ ಎಂಬುವರು ಮಾವುತರಾಗಿ ನಿಯೋಜನೆಗೊಂಡಿದ್ದು, ಈ ಆನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
‘ಮಹೇಂದ್ರ’ ಒಂದು ಕಾಲದಲ್ಲಿ ಪುಂಡನಾಗಿದ್ದ. ತೋಟ ಕಂಡರೆ ನುಗ್ಗುತ್ತಿದ್ದ. ಬೆಳೆಹಾನಿ ಮಾಡುತ್ತಿದ್ದ. ಇಂತಹ ಆನೆಯನ್ನು ಪಳಗಿಸಿ ಕಳೆದ ಬಾರಿ ಮೊದಲ ಬಾರಿಗೆ ದಸರಾಗೆ ಕರೆತರಲಾಗಿತ್ತು.
ಸಾಮಾನ್ಯವಾಗಿ ಮೊದಲ ಸಲ ನಗರಕ್ಕೆ ಬರುವ ಸಾಕಾನೆಗಳು ವಾಹನಗಳ ಸೈರನ್, ಜನರ ಗದ್ದಲ ಕಂಡರೆ ತುಸು ಹೆದರುತ್ತವೆ. ಕೆಲವು ಆನೆಗಳಂತೂ ರಸ್ತೆಗಿಳಿದರೆ ಸಾಕು ಘೀಳಿಡಲು ಶುರು ಮಾಡುತ್ತವೆ. ಕಾಡಿನಿಂದ ನಾಡಿಗೆ ಬಂದ ಕೂಡಲೇ ರಸ್ತೆ ತುಂಬ ವಾಹನ, ಜನರನ್ನು ಕಂಡಾಗ ಈ ರೀತಿ ವರ್ತಿಸುವುದು ಸಾಮಾನ್ಯ. ಆದರೆ, ದಸರೆಗೆ ಮೊದಲ ಬಾರಿಗೆ ಬಂದಿದ್ದ ಮಹೇಂದ್ರ ವಾಹನಗಳ ಸದ್ದಿಗೆ ಬೆದರಲಿಲ್ಲ, ಜನರನ್ನು ಕಂಡು ಘೀಳಿಡಲೂ ಇಲ್ಲ. ಶಾಂತಚಿತ್ತನಾಗಿ ಭಾಗಿಯಾಗಿ ಬೇಷ್ ಎನಿಸಿಕೊಂಡಿದ್ದ.
ಅದು 2016ರ ಘಟನೆ. ರಾಮನಗರದ ತೋಟವೊಂದರಲ್ಲಿ ಆನೆಯೊಂದು ಬೀಡುಬಿಟ್ಟಿತ್ತು. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಆ ಆನೆಯನ್ನು ಸೆರೆ ಹಿಡಿದರು. ನಂತರ ನಾಗರಹೊಳೆಯ ಬಳ್ಳೆ ಶಿಬಿರಕ್ಕೆ ಕರೆತಂದು ‘ಮಹೇಂದ್ರ’ ಎಂಬ ಹೆಸರಿಡಲಾಯಿತು. ಮೊದಲಿಗೆ ವಿನೋದ್‌ರಾಜ್ ಎಂಬುವರು ಈ ಆನೆಗೆ ತರಬೇತಿ ನೀಡಲು ಆರಂಭಿಸಿದರು. ಮೆದು ಸ್ವಭಾವದ ಮಹೇಂದ್ರ ಕೆಲವೇ ದಿನಗಳಲ್ಲಿ ಪಳಗಿದ. ಸದ್ಯ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತ ನೋಡಿಕೊಳ್ಳುತ್ತಿದ್ದಾರೆ.
ಪುಂಡಾನೆಯಾಗಿದ್ದ ಮಹೇಂದ್ರ ಇದೀಗ ಪಳಗಿದ ಮೇಲೆ ಬೇರೆ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಿದ್ದಾನೆ. ಹುಲಿ ಸೆರೆ ಕಾರ್ಯದಲ್ಲೂ ಇವನನ್ನು ಬಳಸಿಕೊಳ್ಳಲಾಗುತ್ತಿದೆ. ನಾಗರಹೊಳೆ ಬಳ್ಳೆ ಕ್ಯಾಂಪಿನ ನೆಚ್ಚಿನ ಆನೆಗಳಲ್ಲಿ ಮಹೇಂದ್ರ ಕೂಡ ಒಬ್ಬ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಆನೆ ಶಿಬಿರಗಳಿಗೆ ತೆರಳಿ ಎಲ್ಲ ಆನೆಗಳ ಆರೋಗ್ಯ, ಸಾಮರ್ಥ್ಯ ಮತ್ತು ಸ್ವಭಾವ ಪರೀಕ್ಷಿಸಿ ದಸರಾ ಮಹೋತ್ಸವದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಹೇಂದ್ರ ಮತ್ತು ಭೀಮನ ಹೆಸರು ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಿ 14 ಆನೆಗಳನ್ನು ಅಂತಿಮಗೊಳಿಸಿ ದಸರೆಗೆ ಕರೆತರಲಾಗುತ್ತದೆ.ಸೌರಭ್‌ಕುಮಾರ್ಡಿಸಿಎಫ್