ಮಂಡ್ಯ: ಭೀಮನ ಅಮಾವಾಸ್ಯೆ ಅಂಗವಾಗಿ ಜಿಲ್ಲೆಯ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ನಗರದ ಕಾಳಿಕಾಂಬ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಶಂಕರಪುರದಲ್ಲಿರುವ ಗಂಗಾಧರೇಶ್ವರ, ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭ, ಕ್ಷಣಾಂಭಿಕೆ, ಲಕ್ಷ್ಮೀದೇವಿ, ಆರತಿ ಉಕ್ಕಡ, ಮಹಾಕಾಳಿ ದೇವಸ್ಥಾನ, ಮಳವಳ್ಳಿ ತಾಲೂಕಿನ ದಂಡಿನ ಮಾರಮ್ಮ, ಪಟ್ಟಲದಮ್ಮ, ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ, ಲಕ್ಷ್ಮೀದೇವಿ, ಮದ್ದೂರು ತಾಲೂಕಿನ ಮದ್ದೂರಮ್ಮ, ಆದಿಶಕ್ತಿ, ಕೆ.ಆರ್.ಪೇಟೆ ತಾಲೂಕಿನ ಪಟ್ಟಲದಮ್ಮ, ಕಿಕ್ಕೇರಮ್ಮ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ನಗರದ ಶಕ್ತಿದೇವತೆ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು. ಸಹಸ್ರಾರು ಜನ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಟ್ರಸ್ಟ್‌ನವರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಂತೆಯೇ ಭೀಮನ ಅಮಾವಾಸ್ಯೆ ಪ್ರಯುಕ್ತ ಮನೆಗಳಲ್ಲಿ ಗಂಡನಿಗೆ ಒಳಿತಾಗಬೇಕು ಎಂಬ ಪ್ರಾರ್ಥಿಸಿ ಪಾದ ಪೂಜೆ ಮಾಡಲಾಯಿತು.
ಭೀಮನ ಅಮಾವಾಸ್ಯೆ ಅಂಗವಾಗಿ ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಶಕ್ತಿ ದೇವತೆ ಹೊಂಗೆತಾಳು ಪಟ್ಟಲದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಬಗೆಯ ಹೂವುಗಳ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ಬಸರಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ತಾಯಿಯ ದರ್ಶನ ಮಾಡಿ ತೀರ್ಥ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು. ಭಕ್ತರು ತಂಬಿಟ್ಟಿನಾರತಿ ಮತ್ತು ತುಪ್ಪದ ಆರತಿ ಹಣ್ಣು ಕಾಯಿ ಸೇವೆ ಸಲ್ಲಿಸಿದರು.