ಜಿಲ್ಲೆ

ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ: ಭೀಮ್ ಆರ್ಮಿ ಸಂಸ್ಥಾಪಕ ಸಿ.ಅನ್ನದಾನಿ ಆರೋಪ

ಮಂಡ್ಯ: ರಾಜ್ಯದಲ್ಲಿ ಅಧಿಕಾರ ಬಂದರೆ ಒಳಮೀಸಲಾತಿ ಜಾರಿಗೊಳಿಸುತ್ತೇವೆಂದು ಆಶ್ವಾಸನೆ ನೀಡಿದ ಕಾಂಗ್ರೆಸ್ ಸರ್ಕಾರ ನೆಪಮಾತ್ರಕ್ಕೆ ಆಯೋಗ ರಚಿಸಿ ಮಾದಿಗ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕ ಸಂಘಟನೆ ಸಂಸ್ಥಾಪಕ ಸಿ.ಅನ್ನದಾನಿ ಆರೋಪಿಸಿದರು.

ಒಳ ಮೀಸಲಾತಿ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಒಳಮೀಸಲಾತಿ ಜಾರಿಗೆ ದತ್ತಾಂಶ ದೊರೆಯುತ್ತಿಲ್ಲವೆಂದು ನೆಪವೊಡ್ಡುತ್ತಿರುವ ರಾಜ್ಯ ಸರ್ಕಾರ, ಸದಾಶಿವ ವರದಿ ಅವೈಜ್ಞಾನಿಕವೆಂದು ಮತ್ತೋರ್ವ ನ್ಯಾಯಮೂರ್ತಿಯನ್ನು ವರದಿ ತಯಾರಿಕೆಗೆ ನೇಮಿಸಿ ಈ ಹಿಂದಿನ ನ್ಯಾಯಮೂರ್ತಿಗೆ ಅವಮಾನ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾವು ಮಲತಾಯಿ ಮಕ್ಕಳಾಗಿದ್ದೇವೆ. ನಮ್ಮ ಸಮುದಾಯಕ್ಕೆ ರಾಹುಲ್‌ಗಾಂಧಿ ಅವರೇ ನಾಯಕರು. ಅವರು ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಂದೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತೇವೆ ಎಂದು ಎಚ್ಚರಿಸಿದರು.

ಮುಖಂಡರಾದ ಸಿ.ಕೆ.ಪಾಪಯ್ಯ, ಸಿದ್ದರಾಜು, ಶಿವಕುಮಾರ್, ಶ್ರೀನಿವಾಸ್ ಇದ್ದರು.