ಮಂಡ್ಯ: ಜಿಲ್ಲಾದ್ಯಂತ ಭೀಮನ ಅಮಾವಾಸ್ಯೆ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಅಂತೆಯೇ ಮನೆಗಳಲ್ಲಿ ಗೃಹಿಣಿಯರು ತಮ್ಮ ಪತಿಯ ಪಾದಪೂಜೆ ಮಾಡಿ ಶ್ರದ್ಧಾಭಕ್ತಿಯಿಂದ ಭೀಮನ ಅಮಾವಾಸ್ಯೆ ಆಚರಿಸಿದರು.
ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ವಿಶೇಷ ಪೂಜೆ ನೆರವೇರಿಯಿತು. ಭಕ್ತರಿಗೆ ಪ್ರಸಾದದ ರೂಪದಲ್ಲಿ ಟ್ರಸ್ಟ್ ವತಿಯಿಂದ ಲಾಡು ವಿತರಿಸಲಾಯಿತು.
ಅನ್ನದಾತೆ ಅನ್ನಪೂರ್ಣೇಶ್ವರಿ ದೇವಾಲಯ, ನೂರಡಿ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಾಲಯ, ಬನ್ನೂರು ರಸ್ತೆಯ ಶನೈಶ್ಚರಸ್ವಾಮಿ ದೇವಾಲಯ, ಪೇಟೆಬೀದಿಯ ಲಕ್ಷ್ಮೀ ದೇವಾಲಯ, ವಿದ್ಯಾನಗರದ ವಿದ್ಯಾಗಣಪತಿ ದೇವಾಲಯ, ಹೊಸಹಳ್ಳಿಯ ಬಿಸಿಲು ಮಾರಮ್ಮದೇವಿ ದೇವಾಲಯ, ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಸೇರಿದಂತೆ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯಿತು. ಅಲ್ಲದೆ ಶಿವನ ದೇವಾಲಯಗಳಲ್ಲೂ ಬೆಳಗ್ಗಿನಿಂದ ಸಂಜೆವರೆಗೂ ವಿಶೇಷ ಪೂಜಾ ಕೈಂಕರ್ಯಗಳು ಸಂಪನ್ನಗೊಂಡವು.
ಮಂಡ್ಯ ತಾಲೂಕು ಸೂನಗಹಳ್ಳಿ ಗ್ರಾಮದ ಶ್ರೀರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಿಗೆ ಕಾಂತಾರ ಅಲಂಕಾರ-ಪ್ರತ್ಯಂಗಿರಾ ಹೋಮ, ಕಂಚಿವರದರಾಜಸ್ವಾಮಿ ಬಸಪ್ಪ ಹಾಗೂ ಗೋಮಾತೆಗೆ ಪಾದಪೂಜೆ-1100 ತೆಂಗಿನ ಸಸಿ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.