ಜಿಲ್ಲೆ

ಆರ್ಮಿಗೆ ಭವ್ಯಾ ನರಸಿಂಹಮೂರ್ತಿ ಸೇರ್ಪಡೆ; ಸೇನೆಯ ಮೀಸಲು ಘಟಕಕ್ಕೆ ನೇಮಕ

ಬೆಂಗಳೂರು: ಭಾರತೀಯ ಸೇನೆಯ ಮೀಸಲು ಘಟಕ ಟೆರಿಟೋರಿಯಲ್​ ಆರ್ಮಿಯ ಕಮಿಷನ್ಡ್​ ಆಫೀಸರ್​ ಆಗಿ ಕರ್ನಾಟಕ ಕಾಂಗ್ರೆಸ್​ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಸೇರ್ಪಡೆಯಾಗಿದ್ದಾರೆ.

ಈ ಕುರಿತು ​'ಎಕ್ಸ್​' ವೇದಿಕೆಯಲ್ಲಿ ಸಂತಸ ಹಂಚಿಕೊಂಡಿದ್ದು, ​'ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದು, ಟೆರಿಟೋರಿಯಲ್​ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್​ ಆಫೀಸರ್​ ಆದ ಏಕೈಕ ಮಹಿಳೆ ನಾನಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಟೆರಿಟೋರಿಯಲ್​ ಆರ್ಮಿಗೆ ಸೇರಿಕೊಂಡವರು, ಅಗತ್ಯ ಬಿದ್ದಾಗ ಭಾರತೀಯ ಸೇನೆಯೊಂದಿಗೆ ಸ್ವಯಂಸೇವಕರಂತೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ದೇಶಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40 ಸಾವಿರಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ. ಇಲ್ಲೂ ಕಮಿಷನ್ಡ್​ ಹಾಗೂ ನಾನ್​ ಕಮಿಷನ್ಡ್​ ಹುದ್ದೆಗಳಿವೆ. ಸೇರ್ಪಡೆಗೊಂಡವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂ ಸೇವಕರಾಗಿ ಭಾರತೀಯ ಸೇನೆಯೊಂದಿಗೆ ಕೆಲಸ ಮಾಡಬಹುದಾಗಿದೆ.

ಟೆರಿಟೋರಿಯಲ್​ ಆರ್ಮಿಯಲ್ಲಿ ಡಿಪಾರ್ಟ್​ಮೆಂಟಲ್​ ಹಾಗೂ ನಾನ್​ ಡಿಪಾರ್ಟ್​ಮೆಂಟಲ್​ ಎಂಬ ಎರಡು ವಿಭಾಗಗಳಿವೆ. ಭವ್ಯಾ ಅವರು ನಾನ್​ ಡಿಪಾರ್ಟ್​ಮೆಂಟಲ್​ ವಿಭಾಗದಿಂದ ಕಮಿಷನ್ಡ್​ ಆಫೀಸರ್​ ಆಗಿ ನೇಮಕಗೊಂಡಿದ್ದಾರೆ.