ಚಿಕ್ಕಬಳ್ಳಾಪುರ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಅಕ್ಕನಿಗೆ ಕಿರುಕುಳ ನೀಡುತ್ತಿದ್ದ ಭಾವನನ್ನು ಸಹಚರರೊಂದಿಗೆ ಸೇರಿಕೊಂಡು ಬಾಮೈದುನನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ತಾಲೂಕಿನ ಗೌಚನಹಳ್ಳಿಯ ಸುಭಾಷ್ (35) ಕೊಲೆಯಾದವ. ಈತನ ಬಾಮೈದ ಮನೋಜ್ ಕುಮಾರ್ ಹಾಗೂ ಆತನ ಸ್ನೇಹಿತರಾದ ಪ್ರವೀಣ, ವಿಘ್ನೇಶ, ಗಿರೀಶ್, ಅನಿಲ್, ನಂದ, ಪ್ರಸಾದ್, ಮೋಹನ್, ಕಾರ್ತಿಕ, ಸಿರೀಶ್ ಅವರನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಖಾಸಗಿ ಸಂಸ್ಥೆ ನೌಕರ ಸುಭಾಷ್ ದೊಡ್ಡಬಳ್ಳಾಪುರ ಮೂಲದ ಇಂದುಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ. ಪ್ರಾರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ, ಕ್ರಮೇಣ ಕೌಟುಂಬಿಕ ಕಲಹ ಹೆಚ್ಚಾಗಿದೆ. ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಸುಭಾಷ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರ ಬಗ್ಗೆ ಮಾಹಿತಿ ತಿಳಿದು ಆಕ್ರೋಶಗೊಂಡ ಮನೋಜ್ ಕುಮಾರ್ ಕೊಲೆ ಮಾಡಿದ್ದಾನೆ.
ಅಟ್ಟಾಡಿಸಿ ಕೊಲೆ
ರಸ್ತೆಯಲ್ಲಿ ಕೆಲವರು ಹಲ್ಲೆ ಮಾಡುತ್ತಿದ್ದಾರೆ. ಬಂದು ಕಾಪಾಡಿ ಎಂದು ಮನೋಜ್ ಕುಮಾರ್, ಭಾವ ಸುಭಾಷ್‌ಗೆ ಕರೆ ಮಾಡಿದ್ದ, ಸ್ಥಳಕ್ಕೆ ಆಗಮಿಸಿದ ಸುಭಾಷ್ ಮೇಲೆ ಮೊದಲೇ ಸಂಚು ರೂಪಿಸಿದಂತೆ ಹೊಂಚು ಹಾಕಿ ಕುಳಿತಿದ್ದ 10 ಜನರ ತಂಡ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹೆದರಿ ಓಡಿದ ಸುಭಾಷ್‌ನನ್ನು ಬಿಡದೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಬಳಿಕ ಮನೋಜ್ ಕುಮಾರ್ ಸೇರಿ ಐವರು ಗ್ರಾಮಾಂತರ ಠಾಣೆಗೆ ಬಂದು ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉಳಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತನ ಸಂಬಂಧಿಕರ ಆಕ್ರಂದನ
ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಠಾಣೆಯ ಬಳಿ ಜಮಾಯಿಸಿದ ಮೃತನ ಸಂಬಂಧಿಕರು, ಕೊಲೆಗಡುಕರಿಗೆ ತಕ್ಕ ಶಿಕ್ಷೆ ಕೊಡಿಸಬೇಕು. ಕಾನೂನು ಪ್ರಕಾರ ನೇಣಿಗೇರಿಸಬೇಕು. ಹಾಗೆಯೇ ಹೊರಗಡೆ ಬಿಟ್ಟಲ್ಲಿ ನಾವೇ ಸಾಯಿಸಿ ಬಿಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದುಶ್ರೀಯೇ ಸಹೋದರನಿಗೆ ಹೇಳಿ ಸುಭಾಷ್‌ನನ್ನು ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಿದರು.