ಜಿಲ್ಲೆ

ಟಿ.ಜಿ. ಭಟ್ ಸಾಹಿತ್ಯೋತ್ಸಾಹ ಅಭಿನಂದನಾರ್ಹ

ವೀರೇಶ ಸೌದ್ರಿ

ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೆಗಡೆಯ ಆದಿತ್ಯ ಪ್ರಕಾಶನದಿಂದ ಪ್ರಕಟಿತ ಕವಿ ಟಿ.ಜಿ. ಭಟ್ಟ ವಿರಚಿತ ‘ಬಾಡದ ಕಡಲು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಹೊನ್ನಾವರದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಪುಸ್ತಕ ಬಿಡುಗಡೆಗೊಳಿಸಿ, ಕಳೆದ ಐದು ದಶಕಗಳಿಂದ ಕವಿ ಟಿ.ಜಿ. ಭಟ್ ಸಾಹಿತ್ಯ ಕೃಷಿ ನಡೆಸುತ್ತ ಬಂದಿದ್ದಾರೆ. 70ರ ಇಳಿವಯಸ್ಸಿನಲ್ಲೂ ಅವರ ಸಾಹಿತ್ಯೋತ್ಸಾಹ ಅಭಿನಂದನಾರ್ಹ ಎಂದರು.

ಕೃತಿ ಪರಿಚಯಿಸಿದ ಹೊನ್ನಾವರ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ನಾಗರಾಜ ಹೆಗಡೆ, ಕೃತಿಯು ವೈವಿಧ್ಯಮಯ ಕವನಗಳನ್ನು ಹೊಂದಿದೆ. ಕಡಲು ಆಕರ್ಷಣೆಯ ಜತೆಗೆ ಮನುಷ್ಯನ ಅಹಂಕಾರ ನಿರಶನಕ್ಕೂ ಸಂದೇಶ ನೀಡುವಂಥದ್ದಾಗಿದೆ. ಸಾಹಿತ್ಯ ಕೇವಲ ಭಾಷಾ ಶಿಕ್ಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲ ಮಾನವರಿಗೆ ಸಂಬಂಧಿಸಿದ್ದು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಅಧ್ಯಕ್ಷತೆ ವಹಿಸಿದ್ದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ ಮಾತನಾಡಿದರು. ಸಂಕಲನದೊಳಗಿನ ಕವನಗಳನ್ನು ಸಂದೀಪ ಮರಾಠೆ, ಉಷಾ ಗೌಡ ಮತ್ತು ಸಮೀಕ್ಷಾ ಜೋಶಿ ಹಾಡಿದರು. ಶ್ರೀಕಾಂತ ಭಟ್ ಪರಿಚಯಿಸಿದರು. ಉಪನ್ಯಾಸಕಿ ರಾಧಾ ನಾಯ್ಕ ಕೃತಿಕಾರರನ್ನು ಪರಿಚಯಿಸಿದರು. ಜಯಶ್ರೀ ಡಿ. ವಂದಿಸಿದರು. ನಾಗಶ್ರೀ ಮತ್ತು ಸಂದೀಪ ಮರಾಠೆ ಕಾರ್ಯಕ್ರಮ ನಿರೂಪಿಸಿದರು.