ಭಟ್ಕಳ: ಕತ್ತಲಲ್ಲಿ ಮುಳುಗಿರುವ ಭಟ್ಕಳದ ಹೆದ್ದಾರಿ ಈಗ ಸಂಪೂರ್ಣ ಕಸದ ತೊಟ್ಟಿಯಾಗಿ ಪರಿಣಮಿಸುತ್ತಿದ್ದು, ಜಿಲ್ಲೆ, ಪರ ಜಿಲ್ಲೆಗಳಿಂದ ಆಗಮಿಸಿದ ಪ್ರಯಾಣಿಕರು ಭಟ್ಕಳ ಬಂತೆಂದರೆ ಮೂಗು ಮುಚ್ಚಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ತಾಣವಾಗಿದೆ. ಪ್ರತಿದಿನ ರಾಶಿ ರಾಶಿ ತ್ಯಾಜ್ಯಗಳು ಬಂದು ಬೀಳುತ್ತಿದೆ. ಪರಿಸರ ಸ್ವಚ್ಛತೆ ಬಗ್ಗೆ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳವರು ಮಾರುದ್ದದ ಭಾಷಣ ಮಾಡುತ್ತಾರೆ. ಆದರೆ, ತಮ್ಮದೆ ಅಂಗಳದಲ್ಲಿ ಕಸದ ತೊಟ್ಟಿ ನಿರ್ವಣವಾದರೂ ಕಸ ಎಸೆದವರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆಕ್ರೋಶ ಎಲ್ಲೆಡೆ ಕೇಳಿ ಬರುತ್ತಿದೆ. ಭಟ್ಕಳ ಹೆದ್ದಾರಿಯಲ್ಲಿ ಓಡಾಡುವ ಆಸುಪಾಸಿನಲ್ಲಿ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ.
ತಾಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ರೀತಿ ಕಸ ಬೀಳುತ್ತಿತ್ತು. ಆದರೆ, ಹೆಬಳೆ ಪಂಚಾಯಿತಿಯಿಂದ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ಕಸವೆಲ್ಲ ರಾಷ್ಟ್ರೀಯ ಹೆದ್ದಾರಿಗೆ ಶಿಫ್ಟ್ ಆಗಿದೆ. ಕಸದ ವಿಲೇವಾರಿ ಸರಿಯಾಗಿ ಆಗದ್ದರಿಂದ ಇಲ್ಲಿ ಗಲೀಜು ವಾತಾವರಣ ನಿರ್ವಣವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಈಗಾಗಲೇ ಮನೆಮನೆಗೆ ಬೆಳಗ್ಗೆ ಕಸದ ವ್ಯಾನ್ ಹೋಗುತ್ತಿದೆಯೋ ಇಲ್ಲವೋ ಎನ್ನುವ ಎಂಬ ಅನುಮಾನ ವ್ಯಕ್ತವಾಗಿದೆ. ಇವೆಲ್ಲವೂ ಹೆಬಳೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಳುವ ಕಸವಾಗಿದೆ. ಕಳೆದೊಂದು ವಾರದಿಂದ ಇಲ್ಲಿ ಕಸ ಬಿಸಾಡುತ್ತಿದ್ದರೂ ಭಟ್ಕಳದವರು ಸುಮ್ಮನೆ ಇದ್ದಿದ್ಯಾಕೆ ಎಂಬ ಪ್ರಶ್ನೆಗೆ ಕಾಡುತ್ತಿದೆ.
ಶಿರಸಿಯಲ್ಲಿ ಈಗಾಗಲೆ ಡೆಂಘೆ ಮಹಾಮಾರಿ ತಾಂಡವವಾಡುತ್ತಿದ್ದು, ಭಟ್ಕಳಕ್ಕೆ ಕರೆತರಲು ಎಲ್ಲ ಪ್ರಯತ್ನ ನಡೆಯುತ್ತಿದೆಯೋ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಭಟ್ಕಳದ ಹೃದಯ ಭಾಗದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಪುರಸಭೆ ಹೀಗೆ ಹತ್ತಾರು ಕಚೇರಿಗಳಿವೆ. ಹೆದ್ದಾರಿ ಪಕ್ಕದಲ್ಲಿ ಬೀಳುತ್ತಿರುವ ಕಸದ ರಾಶಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಕಂಡು ಪ್ರಜ್ಞಾವಂತರು ಬೇಸರಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ವೈದ್ಯರೊಬ್ಬರೂ ವಿಡಿಯೋ ಮಾಡಿ ಆಕ್ರೋಶ ಹೊರಗೆ ಹಾಕಿದ್ದಾರೆ. ಕಸ ಎಸೆಯುವವರಿಗೆ ದೇವರು ಕೂಡ ಕ್ಷಮಿಸಲ್ಲ ಎಂದಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕಸದ ವಿಲೇವಾರಿ ಮಾಡಿ ಮತ್ತೆ ಕಸ ಬೀಳದ ಹಾಗೆ ನೋಡಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕು.