ಭಟ್ಕಳ: ಇಲ್ಲಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆಯಿಂದ ಒಂದು ವಾರ ನಡೆಸುವ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪತ್ರಕರ್ತರ ಜತೆಗೂಡಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ಗಿಡ ನೆಟ್ಟರು.
ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ.ಎಂ., ಜುಲೈ ಮೊದಲ ವಾರದಲ್ಲಿ ಎಲ್ಲ ಕಡೆ ವನಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಶಾಲಾ, ಕಾಲೇಜು, ಆಸ್ಪತ್ರೆ ಮುಂತಾದೆಡೆ ಗಿಡ ನೆಡಲು ಆದ್ಯತೆ ನೀಡಲಾಗಿದೆ. ಶಾಲೆಗಳಲ್ಲಿ ಗಿಡ ನೆಟ್ಟು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಬಾರಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಧ್ಯೇಯವಾಕ್ಯದೊಂದಿಗೆ ಹಸಿರೀಕರಣದ ಶಪಥ ಮಾಡಲಾಗಿದೆ. ಪ್ರತಿಯೊಬ್ಬರೂ ಪ್ರತಿವರ್ಷ ಒಂದು ಗಿಡವಾದರೂ ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡಬೇಕು. ಭಟ್ಕಳ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಒಂದು ವಾರದಲ್ಲಿ 3 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆ ಆಗಬೇಕು. ಉತ್ತಮ ವಾತಾವರಣಕ್ಕೆ ಶೇ. 33ರಷ್ಟು ಹಸಿರು ಹೊದಿಕೆಯ ಅಗತ್ಯವಿದೆ. ಆದರೆ, ನಾವು ಶೇ. 20ರಿಂದ 22ರಷ್ಟು ಮಾತ್ರ ಹಸಿರು ಹೊದಿಕೆಯನ್ನು ಹೊಂದಿದ್ದೇವೆ. ವಾತಾವರಣ ಮತ್ತು ಹವಾಮಾನದ ವೈಪರಿತ್ಯ ಕಡಿಮೆ ಮಾಡಲು ಗಿಡ,ಮರಗಳನ್ನು ಹೆಚ್ಚೆಚ್ಚು ಬೆಳೆಸುವುದು ಇಂದಿನ ಅನಿವಾರ್ಯವಾಗಿದೆ ಎಂದರು.
ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷರಾದ ವಿಷ್ಣು ದೇವಾಡಿಗ, ಎಂ.ಆರ್. ಮಾನ್ವಿ, ಖಜಾಂಚಿ ಮೋಹನ ನಾಯ್ಕ, ಸದಸ್ಯ ಸತೀಶಕುಮಾರ ನಾಯ್ಕ, ನಶೀಮುಲ್ ಘನಿ, ಫಯಾಜ್ ಮುಲ್ಲಾ, ಅರ್ಜುನ ಮಲ್ಯ, ಉದಯ ನಾಯ್ಕ, ಈಶ್ವರ ನಾಯ್ಕ, ಲೋಕೇಶ ನಾಯ್ಕ, ಪತ್ರಕರ್ತರು, ಅರಣ್ಯ ಇಲಾಖೆ ಸಿಬ್ಬಂದಿ ವನಮಹೋತ್ಸವದಲ್ಲಿ ಉಪಸ್ಥಿತರಿದ್ದರು.