ಕಾರವಾರ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಹಲ್ಯಾಣಿ ಗ್ರಾಮದ ಅಪ್ಪ ಮಗನನ್ನು ಅಪರಾಧಿಗಳು ಎಂದು ಪರಿಗಣಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಭಟ್ಕಳ ಹಲ್ಯಾಣಿ ಗ್ರಾಮದ ಶ್ರೀಧರ ಭಟ್ ಹಾಗೂ ವಿನಯ ಶ್ರೀಧರ ಭಟ್ ಎಂಬ ಅಪ್ಪ ಮಗನಿಗೆ ಶಿಕ್ಷೆಯಾಗುವುದು ಖಚಿತವಾಗಿದೆ. ಶಿಕ್ಷೆಯ ಪ್ರಮಾಣ ಹಾಗೂ ದಂಡದ ಪ್ರಮಾಣ ನಿಗದಿಗಾಗಿ ಮೇ 6 ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಾದ ನಡೆಯಲಿದೆ.
2023 ರ ಪೆಬ್ರವರಿಯಲ್ಲಿ ಭಟ್ಕಳ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್(70), ಅವರ ಪತ್ನಿ ಮಾದೇವಿ (60), ಪುತ್ರ ರಾಜೀವ್(40) ಹಾಗೂ ಸೊಸೆ ಕುಸುಮಾ(35) ಎಂಬುವವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಮನೆಯೊಳಗೆ ಮಲಗಿದ್ದ ಸಣ್ಣ ಮಗು ಹಾಗೂ ಪಕ್ಕದ ಮನೆಗೆ ಆಡಲು ಹೋಗಿದ್ದ ಇನ್ನೊಬ್ಬ ಮಗ ಮಾತ್ರ ಬಚಾವಾಗಿದ್ದರು. ಆದರೆ, ಹತ್ಯೆಯಿಂದ ಇಬ್ಬರೂ ಮಕ್ಕಳು ಅನಾಥರಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ಕೊಲೆಯ ಹಿಂದೆ ಆಸ್ತಿ ಜಗಳ ಇರುವುದು ಪತ್ತೆಯಾಗಿತ್ತು. ಶಂಭು ಭಟ್ಟರ ಮನೆಯ ಹಿರಿಮಗ ಶ್ರೀಧರ ಭಟ್ ಏಳು ತಿಂಗಳ ಹಿಂದೆ ಮೃತಪಟ್ಟಿದ್ದ. ಆತನ ಪಾಲಿನ ಜಮೀನಿನ ವಿಚಾರವಾಗಿ ಸೊಸೆ ವಿದ್ಯಾ ಹಾಗೂ ಆಕೆಯ ತವರು ಮನೆಯವರ ಜತೆ ಜಗಳ ನಡೆದಿತ್ತು.
ಅದೇ ವಿಚಾರವಾಗಿ ಸೊಸೆ ವಿದ್ಯಾಳ ತಂದೆ ಶ್ರೀಧರ ಭಟ್ ಹಾಗೂ ಸಹೋದರ ವಿನಯ ಭಟ್ ಇಬ್ಬರೂ ಸೇರಿ ಶಂಭು ಭಟ್ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಅಪ್ಪ ಮಗನನ್ನು ಬಂಧಿಸಿದ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಸಾಕಷ್ಟು ಸಾಕ್ಷ್ಯಗಳ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಮೂರನೇ ಆರೋಪಿ ವಿದ್ಯಾ ಭಟ್ ಈ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗದ ಇಲ್ಲದ ಕಾರಣ ಅವರನ್ನು ಅಪರಾಧಿ ಎಂದು ಪರಿಗಣಿಸಿಲ್ಲ.