ಭಟ್ಕಳ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಭಟ್ಕಳ ತಾಲೂಕಿನ ಬೈಲೂರು, ಕೈಕಿಣಿ, ಮಾವಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿರುವ ಘಟನೆ ವರದಿಯಾಗಿದೆ. ಕೆಲವೆಡೆ ಗೋಡೆ ಹಾಗೂ ಮೇಲ್ಛಾವಣಿ ಕುಸಿ ಬಿದ್ದಿದೆ.
ಬೈಲೂರು ಕಾಸಗೇರಿ ಮಜರೆಯ ಗಿರಿಜಾ ಮಂಜುನಾಥ ನಾಯ್ಕ ಅವರ ಮನೆಗೆ ಕೆರೆಯ ನೀರು ನುಗ್ಗಿ ದೈನಂದಿನ ಉಪಯೋಗದ ವಸ್ತುಗಳು ಹಾನಿಗೊಳಗಾಗಿವೆ. ಕೈಕಿಣಿ ಹೊಯ್ಲಿ ಹಿತ್ಲು ಮಜರೆಯ ಆರು ಮನೆಗಳ ಸುತ್ತಲೂ ನೀರು ತುಂಬಿಕೊAಡಿದ್ದು, ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಿಳಿಸಿದ್ದರೂ ಜನರು ಸ್ಥಳ ಬಿಡಲು ನಿರಾಕರಿಸಿದ್ದಾರೆ.
ಕೈಕಿಣಿಯ ಮಾಸ್ತಮ್ಮ ಮಂಜುನಾಥ ನಾಯ್ಕ ಹಾಗೂ ಭಾಗಿರಥಿ ಶೇಖರ ಮೊಗೇರ ಇವರ ಮನೆಗಳು ಕುಸಿದು ಹಾನಿಗೊಳಗಾದವು. ಮಾವಳ್ಳಿ 1ರ ನಾರಾಯಣ ಮುರ್ಡೇಶ್ವರ, ಖಾಜಾ ಮೊಯಿದ್ದೀನ್ ಚಡಾಖಾನ್, ತಿಮ್ಮು ಸೋಮಯ್ಯ ನಾಯ್ಕ, ವೆಂಕಟೇಶ್ ಹರಿಕಾಂತ ಮನೆಗಳಿಗೆ ನೀರು ನುಗ್ಗಿ ವಸ್ತುಗಳು ಹಾನಿಯಾಗಿವೆ.
ಬೈಲೂರಿನ ಲಲಿತಾ ಈಶ್ವರ ನಾಯ್ಕ, ಸುರೇಶ ನಾರಾಯಣ ನಾಯ್ಕ, ಸೋಮಯ್ಯ ಕುಪ್ಪಯ್ಯ ನಾಯ್ಕ, ನಂದಿನಿ ಅಶೋಕ ದೇವಾಡಿಗ, ಅಮ್ಮ ಮಾಸ್ತಿ ಗೊಂಡ, ಮಂಜುಳಾ ನಾಗಪ್ಪ ನಾಯ್ಕ, ಜಟ್ಟ ಈರಯ್ಯ ನಾಯ್ಕ ಇವರ ಮನೆಗಳಿಗೆ ನೀರು ನುಗ್ಗಿ, ಕೆಲ ಮನೆಗಳ ಗೋಡೆ ಮೇಲ್ಛಾವಣಿ ಕುಸಿದಿದೆ.
ಇದೇ ವೇಳೆ ಶ್ರೀನಿವಾಸ ನಾಗಪ್ಪ ನಾಯ್ಕ ಅವರ ಮನೆಯ ಬಳಿ ಒಣಗಲು ಹಾಕಿದ್ದ ಅಡಿಕೆ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಬೆಳಿಗ್ಗೆ ಸುರಿದ ಮಳೆಯಿಂದ ಮುಡೆಶ್ವರ ಬಸ್ತಿ ಮುಖ್ಯರಸ್ತೆಯಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿದ್ದರೂ, ಮಳೆ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಕೊಂಚ ನಿಯಮತ್ರಣಕ್ಕೆ ಬಂದಿದೆ.