ಭಟ್ಕಳ: ವಿದ್ಯಾರ್ಥಿಗಳು ಸಮಾಜದ ಸಂಸ್ಥೆಗಳಿಂದ ಪಡೆದ ಸಹಾಯವನ್ನು ತಾವು ಮುಂದೆ ಅದನ್ನು ಸಮಾಜಕ್ಕೆ ಹಿಂತಿರಿಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ನಾಮಧಾರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ರಾಮಚಂದ್ರ ನಾಯ್ಕ ಯಲ್ಲಾಪುರ ಹೇಳಿದರು.
ಸಮೀಪದ ಶಿರಾಲಿ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ವೆಂಕಟೇಶ್ವರ ವದ್ಯಾವರ್ಧಕ ಸಂಸ್ಥೆಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಯಾರ ಸೊತ್ತಲ್ಲ, ಅದನ್ನು ಕಷ್ಟಪಟ್ಟು ಪಡೆದರೆ ಅದನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ತಾಲೂಕಿನಲ್ಲಿ ಸತತ 11 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಹಳೆಕೋಟೆ ಹನುಮಂತದ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉನ್ನತ ಹುದ್ದೆ ಪಡೆಯಲಿ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ವಿಶ್ರಾಂತ ನ್ಯಾಯಾಧೀಶ ರವಿ ಎಂ. ನಾಯ್ಕ, ಹೋಟೆಲ್ ಉದ್ಯಮಿ ಮಂಜುನಾಥ ನಾಯ್ಕ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿ ಶ್ರೇಯಸ್ ರವಿ ನಾಯ್ಕ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಯ್ಕ, ಶಿಕ್ಷಣ ಪ್ರೇಮಿಗಳ ಸಂಘದ ರಾಘವೇಂದ್ರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
300ಕ್ಕೂ ಅಧಿಕ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಜಗದೀಶ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಗಂಗಾಧರ ನಾಯ್ಕ, ನಾರಾಯಣ ನಾಯ್ಕ, ಪರಮೇಶ್ವರ ನಾಯ್ಕ, ದೇವೇಂದ್ರ ನಾಯ್ಕ ನಿರ್ವಹಿಸಿದರು.