ಜಿಲ್ಲೆ

ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಸ್ಮ ಕಾರ್ಯಕ್ರಮ

Haveri

ರಟ್ಟಿಹಳ್ಳಿ: ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಎಂದೇ ಪ್ರಸಿದ್ಧವಾಗಿರುವ ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅನೇಕ ಭಕ್ತರ ಸಮ್ಮುಖದಲ್ಲಿ ಭಾನುವಾರ ಭಸ್ಮ ಕಾರ್ಯಕ್ರಮ ಜರುಗಿತು.

ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಮಹಾಲಕ್ಷ್ಮೀ ದೇವಿಯ ಜಾತ್ರೆ ಆಚರಿಸಲಾಗುತಿತ್ತು. ಈ ಬಾರಿ ಕರೊನಾದಿಂದಾಗಿ ಸರಳವಾಗಿ ಆಚರಿಸಲಾಯಿತು. ಭಕ್ತರು ಮಾಸ್ಕ್ ಧರಿಸಿ, ಪರಸ್ಪರ ಅಂತರದೊಂದಿಗೆ ದೇವಿಯ ದರ್ಶನ ಪಡೆದರು.

ಮಹಾಲಕ್ಷ್ಮೀ ದೇವಿಗೆ ಬೆಳಗ್ಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ಜರುಗಿದವು. ದೇವಸ್ಥಾನದ ಮುಂಭಾಗದಲ್ಲಿ ಇರುವ ಅಗ್ನಿಕುಂಡದಲ್ಲಿ ಭಕ್ತರು ಒಣಕೊಬ್ಬರಿ ಬಟ್ಟಲು, ತುಪ್ಪ, ವಸ್ತ್ರಗಳನ್ನು ಹಾಕಿ ಬೇಡಿಕೊಳ್ಳುತ್ತಿದ್ದರು. ರಟ್ಟಿಹಳ್ಳಿ, ಶಿರಗಂಬಿ, ಮಕರಿ, ಕುಡುಪಲಿ, ಹಿರೇಮೊರಬ, ದೊಡ್ಡಗುಬ್ಬಿ, ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಭಸ್ಮ ಕಾರ್ಯಕ್ರಮ: ರಾತ್ರಿ 9.30ಕ್ಕೆ ದೇವಿಯ ಸಮ್ಮುಖದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ದೇವರ ಆಗಮನದ ನಂತರ ಮುತೆôದೆಯರು ಉಡಿ ತುಂಬಿದರು. ಬಳಿಕ ಅಗ್ನಿಕುಂಡದಲ್ಲಿ ಭಸ್ಮ ಕಾರ್ಯಕ್ರಮ ಪ್ರಾರಂಭವಾಯಿತು. ರಾತ್ರಿ ಡೊಳ್ಳು ಕುಣಿತ ಮತ್ತು ಭಜನೆ ಜರುಗಿತು.

ಇಲ್ಲಿನ ಸನ್ನಿಧಿಯಲ್ಲಿ ದೀಪಾವಳಿಯ ಅಮಾವಸ್ಯೆಯಂದು ಸಿಗುವ ಭಸ್ಮವನ್ನು ರೈತರು ತಮ್ಮ ಜಮೀನುಗಳಿಗೆ ಹಾಕುವುದರಿಂದ ಉತ್ತಮ ಬೆಳೆ ಮಳೆಯಾಗುತ್ತದೆ ಮತ್ತು ಜಾನುವರುಗಳು ಹಾಗೂ ಮನೆಗಳಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯ ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂಬುದು ಭಕ್ತರ ಅಚಲವಾದ ನಂಬಿಕೆಯಾಗಿದೆ.