ಜಿಲ್ಲೆ

ನೃತ್ಯ ಶಂಕರನಿಗೆ 'ಅನಘಾ' ಪುಷ್ಪಾಂಜಲಿ

ವಸಂತ ಮಂಟಪದಲ್ಲಿ ಗೆಜ್ಜೆಯ ನಿನಾದ | ಮನ ಸೆಳೆದ ನಾಟ್ಯದ ಆಹ್ಲಾದ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೊಡವೂರಿನ ಮಹತೋಬಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಸಂಯೋಜನೆಯಲ್ಲಿ ಸೋಮವಾರ ರಾತ್ರಿ ವಸಂತ ಮಂಟಪದಲ್ಲಿ ನಡೆದ ನೃತ್ಯ ಶಂಕರ 63ನೆ ಸಾಪ್ತಾಹಿಕ ಸರಣಿಯಲ್ಲಿ ಅನಘಾ ಹೆಗಡೆ ತನ್ನ ನೃತ್ಯ ಪ್ರೌಢಿಮೆ ಪ್ರದರ್ಶಿಸಿದರು.

ಆರಂಭದಲ್ಲಿ ವಿಘ್ನನಿವಾರಕ ಗಣಪತಿಯನ್ನು ಪ್ರಾರ್ಥಿಸುತ್ತ, ನಟರಾಜನಿಗೆ ಪುಷ್ಪಾಂಜಲಿ ನೃತ್ಯ ಸಮರ್ಪಿಸಿ, ನಾಟ್ಯ ಆರಂಭಿಸಿದರು. ಬಳಿಕ ರಾಗ್​ ಸರಸ್ವತಿ ಮತ್ತು ಆದಿ ತಾಳದಲ್ಲಿ ಮಧುರೈ ಆರ್​. ಮುರಳೀಧರನ್​ ರಚಿಸಿರುವ ಕೃತಿಗೆ ಅನಘಾ ಹೆಜ್ಜೆ ಹಾಕುತ್ತ, ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರು.

ನೃತ್ಯ ಪ್ರದರ್ಶಿಸುತ್ತಿರುವ ಅನಘಾ ಹೆಗಡೆ.

ಕಲಾ ಪ್ರೌಢಿಮೆ

ವಿಷ್ಣುವಿನ ಮಹಿಮೆ ಸಾರುವ ದಶಾವತಾರ ನೃತ್ಯ, ಶಿವ ತಾಂಡವ ನೃತ್ಯ, ರಾಮಾಯಣ ಕಥೆ ಆಧಾರಿತ ಕನಕದಾಸ ರಚನೆಯ ಏನೆಂದಳೇನೆಂದಳು ನಿನ್ನೊಳು ಸೀತೆ ಹನುಮಯ್ಯ ಹಾಡಿಗೆ ನೃತ್ಯ, ದೇವಿಯ ಮಹಿಮೆ ಪ್ರಶಂಸಿಸುವ ರಕ್ತ ಬೀಜಾಸುರನ ಸಂಹಾರ ನೃತ್ಯ, ಅಂತಿಮವಾಗಿ ತಿಲ್ಲಾನದಲ್ಲಿ ರಾಗ ಬೃಂದಾವನೀಯ ಮತ್ತು ಆದಿ ತಾಳದಲ್ಲಿ ಡಾ. ಎಂ. ಬಾಲಮುರಳೀಕೃಷ್ಣನ್​ ಅವರ ಸಂಯೋಜನೆಯ ನೃತ್ಯ ಪ್ರದರ್ಶಿಸಿದ ಅನಘಾ, ನೃತ್ಯ ಕಲಾ ಪ್ರೌಢಿಮೆ ಪ್ರದರ್ಶಿಸಿ ಮನ ಸೆಳೆದರು.

ನೃತ್ಯಗುರು ಸುಧೀರ್​ ರಾವ್​ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

ಬಾಲ್ಯದಲ್ಲೇ ನೃತ್ಯದ ಒಲವು

ಕೊಡವೂರಿನ ನೃತ್ಯನಿಕೇತನದ ಕಲಾವಿದೆ ಹಾಗೂ ವಿದ್ಯಾರ್ಥಿನಿಯಾಗಿರುವ ಅನಘಾ ಹೆಗಡೆ, ಉಡುಪಿಯ ಎಲ್​.ಎಂ. ಹೆಗಡೆ ಹಾಗೂ ವಿದ್ಯಾ ಹೆಗಡೆ ದಂಪತಿ ಪುತ್ರಿ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ, ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ನೃತ್ಯದ ಕುರಿತು ಒಲವು ಹೊಂದಿದ್ದ ಅವರು, 6ನೇ ವಯಸ್ಸಿನಿಂದಲೇ ನೃತ್ಯನಿಕೇತನ ಸಂಸ್ಥೆಯ ವಿದ್ವಾನ್​ ಸುಧೀರ್​ ರಾವ್​ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್​ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಐದು ವರ್ಷದಿಂದ ಸಂಸ್ಥೆಯ ನೃತ್ಯ ತಂಡದಲ್ಲಿರುವ ಅವರು, ವಿವಿಧ ಸಂದರ್ಭಗಳಲ್ಲಿ ರಾಷ್ಟ್ರೀಯ ಮಟ್ಟದ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿನ ನೀಡಿದ್ದಾರೆ. ವಿದುಷಿ ವಿನುತಾ ಎಂ. ಆಚಾರ್ಯ ಹಾಗೂ ವಿದುಷಿ ವಸಂತಲಕ್ಷ್ಮೀ ಹೆಬ್ಬಾರ್​ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತವನ್ನೂ ಕಲಿಯುತ್ತಿದ್ದಾರೆ. 2022ರಲ್ಲಿ ಭರತನಾಟ್ಯದ ಪ್ರೀ ವಿದ್ವತ್​ ಪೂರ್ಣಗೊಳಿಸಿದ್ದು, ಇದೇ ಸೆ.23ರಂದು ಅಂತಿಮ ವಿದ್ವತ್​ ಪರೀಕ್ಷೆ ಬರೆಯಲಿದ್ದಾರೆ.