ಜಿಲ್ಲೆ

ಅನ್ಯಾಯದ ವಿರುದ್ಧ, ನ್ಯಾಯಕ್ಕಾಗಿ ಧ್ವನಿ ಎತ್ತಿ...

ಎಐಎಂಸಿ ಅಧ್ಯಕ್ಷೆ ಅಲ್ಕಾ ಲಂಬಾ ಕರೆ

ದೆಹಲಿಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆಯರಿಗೆ ತರಬೇತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದಲ್ಲಿ ದಿನೇದಿನೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅತ್ಯಾಚಾರ, ದೌರ್ಜನ್ಯಕ್ಕೆ ತುತ್ತಾಗುವ ಮಹಿಳೆ ಅಥವಾ ಹೆಣ್ಣು ಮಕ್ಕಳು ನ್ಯಾಯಕ್ಕಾಗಿ ಹೋರಾಡುವಷ್ಟು ಶಕ್ತರಿರುವುದಿಲ್ಲ. ಹೀಗಾಗಿ ಅಂಥವರ ಪರವಾಗಿ ನಮ್ಮ ಕಾಂಗ್ರೆಸ್​ನ ಮಹಿಳಾ ನಾಯಕಿಯರು ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತಬೇಕು. ನ್ಯಾಯಕ್ಕಾಗಿ ಅವರೊಂದಿಗೆ ನಿಂತು ಹೋರಾಡಬೇಕು ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್​ (ಎಐಎಂಸಿ) ಅಧ್ಯಕ್ಷೆ ಅಲ್ಕಾ ಲಂಬಾ ಕರೆ ನೀಡಿದರು.

ದೆಹಲಿಯ ಇಂದಿರಾ ಭವನದಲ್ಲಿ ದೇಶದ 12 ರಾಜ್ಯಗಳ ಒಟ್ಟು 50 ಜಿಲ್ಲೆಯ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆಯರಿಗೆ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗೌರವ್​ ಪಂಢಿ, ಅವಿನಾಶ್​ ಪಾಂಡೆ (ಉ.ಪ್ರ. ಉಸ್ತುವಾರಿ), ಅನಿಲ್​ ಜೈಹಿಂದ್​, ಸುಖ್ಜಿಂದರ್​ ಸಿಂಗ್​ ರನಧಾವ ಪಂಜಾಬ್​, ರತ್ನಾ ಪಾಂಡೆ ಪಾಲ್ಗೊಂಡು ತರಬೇತಿ ನೀಡಿದರು.

ಚುಪ್​ ನಹೀ ರೆಹನಾ ಆವಾಜ್​ ಉಠಾನಾ...

ಅಶಕ್ತರು, ದೀನರು ಹಾಗೂ ಮಹಿಳೆಯರ ಏಳಿಗೆಯ ಪರವಾಗಿ ನಮ್ಮ ಪಕ್ಷ ನಿರಂತರ ಶ್ರಮಿಸುತ್ತಿದೆ. ಅದುವೇ ಕಾಂಗ್ರೆಸ್​ ನಡೆದು ಬಂದ ದಾರಿಯಾಗಿದೆ. ಜನಪರ ಯೋಜನೆಗಳನ್ನು ರೂಪಿಸಿದೆ. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಮೇಲ್ಮನೆಗೆ ಶೇ.33 ಮೀಸಲಾತಿಗೆ ಸದನದಲ್ಲಿ ಒಪ್ಪಿಗೆ ಸಿಕ್ಕಿದೆ. ಅದನ್ನು ಜಾರಿಗೊಳಿಸಲು ನಾವು ಹೋರಾಡಬೇಕು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಹಕ್ಕುಗಳ ಜಾಗೃತಿ ಮೂಡಿಸಲು ಸಮಾಜದ ಎಲ್ಲ ವರ್ಗಗಳ ಮಹಿಳೆಯರ ಪರವಾಗಿ ಧ್ವನಿ ಎತ್ತಬೇಕು. ನಮ್ಮ ಧ್ವನಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಮಹಿಳೆಯರನ್ನು ತಲುಪಬೇಕು. ಚುಪ್​ ನಹೀ ರೆಹನಾ ಆವಾಜ್​ ಉಠಾನಾ ಎಂದು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷೆಯರಿಗೆ ಅಲ್ಕಾ ಲಂಬಾ ಸೂಚನೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಪಕ್ಷ ಹಾಗೂ ಮಹಿಳಾ ಸಂಘಟನೆಗಾಗಿ ರಾಜ್ಯ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ನನ್ನನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ. ದೆಹಲಿಯಲ್ಲಿ ದೇಶದ 50 ಜಿಲ್ಲೆಗಳ ಮಹಿಳಾ ಅಧ್ಯೆಯರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತು. ಕರ್ನಾಟಕದಿಂದ 5 ಜಿಲ್ಲೆಗಳ ಮಹಿಳಾ ಅಧ್ಯಕ್ಷೆಯರು ಪಾಲ್ಗೊಂಡಿದ್ದೆವು. | ಜ್ಯೋತಿ ಹೆಬ್ಬಾರ. ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ನೂತನ ಅಧ್ಯಕ್ಷೆ