ಚಾಮರಾಜನಗರ: ಭಾರತದ ತ್ರಿವರ್ಣ ಧ್ವಜವು ಸಾರ್ವಭೌಮತ್ವದ ಸಂಕೇತ ಹಾಗೂ ಎಲ್ಲ ನಾಗರಿಕರ ಹೆಮ್ಮೆ ಎಂದು ಭಾರತ ಸೇವಾ ದಳದ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ತಾಲೂಕು ಭಾರತ ಸೇವಾ ದಳದ ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರಧ್ವಜ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸಿ, ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಗೌರವ ಮೂಡಿಸಬೇಕು. ರಾಷ್ಟ್ರಧ್ವಜ ಅರಳಿಸಿ ದೇಶ ಪ್ರೇಮ ಮೆರೆಯಬೇಕು. ನಮ್ಮ ರಾಷ್ಟ್ರೀಯ ಧ್ವಜವು ದೇಶದ ಏಕತೆ, ಸಮಗ್ರತೆ ಮತ್ತು ಸಾಮ್ಯತೆಯ ಅಭಿಮಾನದ ಸಂಕೇತವಾಗಿದೆ. ದೇಶದ ವಿಭಿನ್ನ ಜಾತಿ, ಪಂಗಡ ಹಾಗೂ ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ, ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ನಿರ್ಮಲಾ ಮಾತನಾಡಿ, ರಾಷ್ಟ್ರಧ್ವಜವನ್ನು ಗೌರವಿಸುವುದು ನಮ್ಮ ಪೂರ್ವಜರು ಮಾಡಿದ ಹೋರಾಟಗಳು ಮತ್ತು ತ್ಯಾಗಗಳನ್ನು ಗುರುತಿಸುವ ಮಾರ್ಗವಾಗಿದೆ. ಇಡೀ ದೇಶದಲ್ಲಿ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಸಂಯುಕ್ತ ಸಂಘದಲ್ಲಿ ಮಾತ್ರ ರಾಷ್ಟ್ರಧ್ವಜ ತಯಾರು ಮಾಡಲಾಗುತ್ತಿತ್ತು. 1954ರಲ್ಲಿ ಧಾರವಾಡದ ಗರಗ ಖಾದಿ ಕೇಂದ್ರಕ್ಕೆ ರಾಷ್ಟ್ರಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದೆ. ರಾಷ್ಟ್ರಧ್ವಜ ನಮ್ಮ ಹೆಮ್ಮೆ ಎಂದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಅರುಣ್‌ಕುಮಾರ್ ಮಾತನಾಡಿ, ರಾಷ್ಟ್ರಧ್ವಜದ ಉಗಮ, ಇತಿಹಾಸ, ತ್ರಿವರ್ಣ ಧ್ವಜದ ಮಹತ್ವ ಹಾಗೂ ಆರೋಹಣ-ಅವರೋಹಣ ಮತ್ತು ರಾಷ್ಟ್ರ ಲಾಂಛನದ ಮಹತ್ವದ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಧ್ವಜ ಕುರಿತು ರಸಪ್ರಶ್ನೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿನಿಯರಿಗೆ ಭಾರತ ಸೇವಾದಳದ ಕಾರ್ಯದರ್ಶಿ ನಾಗರಾಜು, ಕೋಶಾಧ್ಯಕ್ಷ ಪ್ರಸಾದ್ ಬಹುಮಾನ ವಿತರಿಸಿದರು. ಉಪನ್ಯಾಸಕರಾದ ನಾಗಯ್ಯ ಮತ್ತು ನರಸಿಂಹಯ್ಯ ಉಪಸ್ಥಿತರಿದ್ದರು.