ಜಿಲ್ಲೆ

ಉಡುಪಿಯಲ್ಲಿ ಭಾರತ್​ ರೈಸ್​ ಬಿಡುಗಡೆ

ಉಡುಪಿ: ಕಡಿಮೆ ದರದಲ್ಲಿ ಗ್ರಾಹಕರಿಗೆ ಅಕ್ಕಿ ವಿತರಿಸುವ ಭಾರತ್​ ರೈಸ್​ ಯೋಜನೆ ರೂಪಿಸಲಾಗಿದ್ದು, ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಜನಸ್ಪಂದನೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಆದಿಉಡುಪಿ ಎಪಿಎಂಸಿ ಮಾರುಕಟ್ಟೆ ಸಮೀಪ ಭಾರತ್​ ರೈಸ್​ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ಕಿ ಪೂರೈಕೆ ಮಾಡಲು ಕಷ್ಟವಾಗುವಷ್ಟು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ 45-ರಿಂದ 50 ರೂ.ಗಿಂತ ಕಡಿಮೆ ಬೆಲೆ ಅಕ್ಕಿ ಸಿಗುತ್ತಿಲ್ಲ. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಬರಗಾಲದಿಂದಾಗಿ ಈ ಬಾರಿ ಬೆಳೆ ಕಡಿಮೆ ಬರುವ ಸಾಧ್ಯತೆ ಇದ್ದು, ಮುಂದಿನ ದಿನದಲ್ಲಿ ಯೋಜನೆ ಇನ್ನಷ್ಟು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿ, ಖಾಸಗಿ ಮಾರುಕಟ್ಟೆಯಲ್ಲೂ ಅಕ್ಕಿ ಲಭ್ಯವಾಗಲಿದ್ದು, ಬಡವರಿಗೆ ಪ್ರಯೋಜನವಾಗುವ ಉತ್ತಮ ಯೋಜನೆ ಇದಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಬಿಜೆಪಿ ಮುಖಂಡರಾದ ಸುಪ್ರಸಾದ್​ ಶೆಟ್ಟಿ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.