ಕೋಲಾರ : ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ರಾಷ್ಟ್ರೀಯ ಹೆದ್ದಾರಿ 75 ಬಂದ್‍ಗೆ ಮುಂದಾಗಿದ್ದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಬಂದ್ ನಡುವೆಯೂ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು, ಆದರೆ ಸಾರ್ವಜನಿಕರ ಹಾಜರಾತಿ ತೀರಾ ವಿರಳವಾಗಿತ್ತು. ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳು, ಅಂಚೆ ಕಚೇರಿಗಳು, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕೋಲಾರ ಬಸ್ ನಿಲ್ದಾಣದಿಂದ ಬೆಳಗ್ಗೆ ಸೀಮಿತ ಬಸ್‍ಗಳು ಬೆಂಗಳೂರು ಹಾಗೂ ತಾಲೂಕು ಕೇಂದ್ರಕ್ಕೆ ಸೀಮಿತ ಬಸ್‍ಹಳು ಓಡಾಟ ನಡೆಸಿ ಮತ್ತೆ ಸ್ಥಗಿತಗೊಂಡಿತ್ತು. ಉಳಿದಂತೆ ಅಟೊ, ದ್ವಿಚಕ್ರ ವಾಹನ ಕಾರಸಿನ್ನಿತರೆ ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.
ಬೆಳಗ್ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವಾದರೂ ನಗರದ ಡೂಂ ಲೈಟ್ ವೃತ್ತ, ಶಾರದಾ ಟಾಕೀಸ್ ರಸ್ತೆ,ಟೇಕಲ್ ರಸ್ತೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೊಟೆಲ್‍ಗಳು ತೆರೆದಿದ್ದವು ಸೇರಿದಂತೆ ಬಂಡಿಗಳಲ್ಲಿ ತಂಡಿತಿನಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಪ್ರತಿಭಟನಕಾರರು ಕೂಡ ಇದೇ ಹೋಟೆಲ್, ಬಂಡಿಗಳಿಂದಾಗಿ ಹಸಿವು ನೀಗಿಸಿಕೊಂಡಿದ್ದು ಕಂಡುಬಂತು. ಮಧ್ಯಾಹ್ನದ ನಂತರ ಮತ್ತೆ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದು ಕಂಡುಬಂತು.
ವಿನೂತನ ಪ್ರತಿಭಟನೆ
ನಸುಕಿನಲ್ಲೇ ರಸ್ತೆಗಿಳಿದ ರೈತ ಸಂಘದ ಮುಖಂಡರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದರಲ್ಲದೆ ಟಯರ್‍ಗೆ ಬೆಂಕಿ ಹಚ್ಚಲು ಮುಂದಾದರು. ಇದಕ್ಕೆ ಪೊಲೀಸರು ಆಕ್ಷೇಪಿಸಿದಾಗ ಮಾತಿನ ಚಕಮಕಿ ಉಂಟಾಯಿತು. ಟಯರ್ ಸುಟ್ಟರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದರಿಂದ ಅನಂತರ ಸೌದೆಗೆ ಬೆಂಕಿ ಹಚ್ಚಿ ಅದರಲ್ಲೇ ಟೀ ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಡಲೆಕಾಯಿ, ಜೋಳದ ತೆನೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಜ್ಜಿ ಬೋಂಡಾ ಮಾಡಿದರಲ್ಲದೆ ನಡು ರಸ್ತೆಯಲ್ಲೇ ಎಲೆ ಹಾಸಿ ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಬಸ್ ನಿಲ್ದಾಣಕ್ಕೆ ಎತ್ತಿನ ಬಂಡಿ
ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಎತ್ತಿನಬಂಡಿಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಬಸ್ ನಿಲ್ದಾಣಕ್ಕೆ ನುಗ್ಗಿದರಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಪ್ರಯಾಣಿಕೆರ ಪರದಾಟ
ಸಿಪಿಐಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ರೈತ ಸಂಘದ ಅಬ್ಬಣಿ ಶಿವಪ್ಪ ನೇತೃತ್ವದ ತಂಡ ಕೆಎಸ್ಸಾರ್ಟಿಸಿ ಬಸ್ ಡಿಪೋ ಮುಂಭಾಗವೇ ಧರಣಿ ಕುಳಿತು ಬಸ್‍ಗಳು ಡಿಪೋ ಬಿಟ್ಟು ಹೊರಬರದಂತೆ ತಡೆ ಹಾಕಿದ್ದರು. ಇತ್ತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ತೆರಳುವ ಸಲುವಾಗಿ ನೂರಾರು ಪ್ರಯಾಣಿಕರು ಕಾಯುತ್ತಾ ಬಸ್ ಇಲ್ಲದೆ ಪರದಾಡುತ್ತಿದ್ದರು.
ಬಸ್ ವ್ಯವಸ್ಥೆ
ಪ್ರಯಾಣಿಕರ ಪರದಾಟದ ಹಿನ್ನೆಯಲ್ಲಿ ವೃತ್ತ ನಿರೀಕ್ಷಕ ರಂಗಶಾಮಯ್ಯ ಬಸ್ ನಿಲ್ದಾಣಕ್ಕೆ ದೌಡಾಯಿಸಿದರಲ್ಲದೆ ಬಸ್ ಸಂಚಾರ ಆರಂಭಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿ ಮಾತುಕತೆ ನಡೆಸಿದರು.ಅಂತಿಮವಾಗಿ ಪೊಲೀಸ್ ಭದ್ರತೆಯೊಂದಿಗೆ ಬೆಂಗಳೂರು ಮತ್ತು ಹೊಸಕೋಟೆಯವರೆಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಇದೇ ರೀತಿ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಮಾಲೂರು,ಕೆಜಿಎಫ್ ಇನ್ನಿತರೆ ತಾಲೂಕು ಕೇಂದ್ರಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಯಿತಾದರೂ ಮಧ್ಯಾಹ್ನದ ವೇಳೆ ಪ್ರತಿಭಟನಕಾರರು ಮತ್ತೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಯಿತು.
ಬಂಧನ
ಈ ಮದ್ಯೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೊಂಡರಾಜನಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಅವಕಾಶ ನೀಡಲಿಲ್ಲ.ಪ್ರತಿಭಟನಕಾರರು ಪಟ್ಟು ಸಡಿಲಿಸದಿದ್ದಾಗ ಸುಮಾರು 35ರಿಂದ 40ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧನಕ್ಕೆ ಒಳಪಡಿಸಿ ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಿಟ್ಟುಬಿಟ್ಟಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರಾದ ಚಂಬೆ ರಾಜೇಶ್,ಕೆ.ಆರ್. ತ್ಯಾಗರಾಜ್, ಕಲ್ವಮಂಜಲಿ ರಾಮುಶಿವಣ್ಣ, ನಾರಾಯಣಸ್ವಾಮಿ, ಪುಟ್ಟರಾಜು ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.