ಯಲ್ಲಾಪುರ: ವಿದ್ಯಾರ್ಥಿಗಳು ಓದಿನ ಭರದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರದಿಂದ ದೂರಹೋಗುತ್ತಿದ್ದಾರೆ. ಅದಕ್ಕಾಗಿ ಭಾರತೀಯ ಜೀವನ ಶಿಕ್ಷಣದ ಕುರಿತಾದ ಶಿಬಿರವನ್ನು ಏ. 11 ರಿಂದ 18 ರವರೆಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಆಯೋಜಿಸಿದ್ದೇವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಬುಧವಾರ ಸುದ್ದಿ ಗೋಷ್ಠಿಯಲ್ಲಿ ಅವರು ಶಿಬಿರದ ಕುರಿತಾದ ಮಾಹಿತಿ ನೀಡಿದರು.
ವಿಶ್ವದರ್ಶನ ಸೇವಾ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಗೋವರ್ಧನ ಗೋಶಾಲೆ ಸಂಯುಕ್ತ ಆಶ್ರಯದಲ್ಲಿ 8 ದಿನಗಳ ಶಿಬಿರ ಆಯೋಜಿಸಲಾಗಿದೆ.
ಯೋಗ, ದೇವರ ಪ್ರಾರ್ಥನೆ, ಪೂಜೆ, ಹಿರಿಯರಿಗೆ ಗೌರವ ನೀಡುವುದು, ದೇಶಾಭಿಮಾನ ಬೆಳೆಸುವುದು, ಪುರಾಣ ಪುರುಷರು, ಕ್ರಾಂತಿ ಪುರುಷರ ಚರಿತ್ರೆ, ಗುಂಪು ಚರ್ಚೆ, ಸಂಜೆ ಆಟ, ಓಟ, ಹಿರಿಯ ವಿಷಯ ತಜ್ಞರಿಂದ ಶಾರೀರಿಕ, ಬೌದ್ಧಿಕ, ಮಾನಸಿಕ, ದೈಹಿಕವಾಗಿ ಸದೃಢರಾಗಲು ಚಿಂತನೆಗಳನ್ನು ನೀಡುವುದು ಸೇರಿದಂತೆ ಹತ್ತು ಹಲವು ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನದ ಗುರಿ ಹೊಂದಿದ್ದೇವೆ ಎಂದು ವಿವರಿಸಿದರು.
ಕೃಷಿಯ ಮಹತ್ವ, ಗೋವಿನ ಕುರಿತು ಅರಿವು, ಕುಟುಂಬ ವ್ಯವಸ್ಥೆಯ ನೈತಿಕ ಮೌಲ್ಯ, ಇತಿಹಾಸ, ವಿಜ್ಞಾನ ಪರಂಪರೆ, ಶ್ರದ್ಧೆ, ನಂಬಿಕೆಯನ್ನು ಬೆಳೆಸುವ ಕುರಿತು ಸರಿಯಾದ ಮಾರ್ಗದರ್ಶನವನ್ನು ಈ ಶಿಬಿರದಲ್ಲಿ ನೀಡಲಾಗುವುದು.
ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ, ಆಧುನಿಕ ಶಿಕ್ಷಣಕ್ಕೂ ಭದ್ರ ಬುನಾದಿ ಹಾಕಬಲ್ಲ ಜೀವನ ಪರ್ಯಂತ ಪಾಲಿಸಬಲ್ಲ ಸುಸಂಸ್ಕೃತವಾದ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದೇವೆ. ಸಂಘದ ಪ್ರಮುಖರಾದ ನರೇಂದ್ರರವರು, ಕುಟುಂಬ ಪ್ರಬೋಧನ ಮುಖ್ಯಸ್ಥ ಸು. ರಾಮಣ್ಣ ಸೇರಿದಂತೆ ಅನೇಕ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಬೆಳಗ್ಗೆ 8 ಗಂಟೆಗೆ ಪ್ರಾರ್ಥನೆಯೊಂದಿಗೆ ಶಿಬಿರ ಪ್ರಾರಂಭಗೊಂಡು, ಸಂಜೆ 6 ರ ಹೊತ್ತಿಗೆ ಸಮಾಪ್ತಿಯಾಗಲಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ, ಸಂಜೆ ಲಘು ಉಪಹಾರದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ ಎಂದರು.
ಹಿರಿಯ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಶಿಬಿರ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಸಹಸಂಚಾಲಕ ದೋಂಡು ಪಾಟೀಲ, ಸಮಿತಿಯ ಶ್ರೀರಾಮ ಲಾಲಗುಳಿ, ವಿಶ್ವದರ್ಶನದ ಸಿ.ಇ.ಒ. ಅಜೇಯ ಭಾರತೀಯ ಉಪಸ್ಥಿತರಿದ್ದರು.
ಶಿಬಿರದಲ್ಲಿ 200 ಮಕ್ಕಳಿಗೆ ಮಾತ್ರ ಅವಕಾಶವಿದೆ. 5ನೇ ತರಗತಿ ತೇರ್ಗಡೆ ಹೊಂದಿದವರಿಂದ ಹಿಡಿದು 9ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ (ಅದರಲ್ಲಿ ಗಂಡು ಮತ್ತು ಹೆಣ್ಣು ತಲಾ 100 ರಂತೆ) ಪ್ರವೇಶಕ್ಕೆ ಅವಕಾಶ ನೀಡಿದ್ದೇವೆ. ಈಗಾಗಲೇ ಶೇ.50 ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಶ್ವದರ್ಶನ ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾಹಿತಿಗಾಗಿ 7337875279 ಗೆ ಸಂರ್ಪಸಬಹುದು.