ಹುಬ್ಬಳ್ಳಿ : ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಜರುಗಿದ ವಿದುಷಿ ಕೃತಿ ಆನೆಗುಂದಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಯಿತು.
ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ಟ ಅವರ ಶಿಷ್ಯೆ ಕೃತಿ ಆರಂಭದಲ್ಲಿ ಪುಷ್ಪಾಂಜಲಿ, ಆಲಾರಿಪು, ಜಟಿಸ್ವರ, ಶಿವಸ್ತುತಿ, ಧರು ದೇವರನಾಮಗಳನ್ನು ಅತ್ಯಂತ ಮೋಹಕವಾಗಿ ಪ್ರದರ್ಶಿಸಿದರು.
ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅವರು ರಚಿಸಿದ ಯಾಜ್ಞಸೇನೆ ನೃತ್ಯರೂಪಕವನ್ನು ಕೃತಿ ಪ್ರದರ್ಶಿಸುತ್ತಿದ್ದಂತೆಯೇ ಪ್ರೇಕ್ಷಕರಿಂದ ಕರತಾಡತನ ಕೇಳಿಬಂದಿತು. ದ್ರೌಪದಿ ಅನುಭವಿಸಿದ ಅವಮಾನ, ಆಕ್ರೋಶ, ದ್ರೌಪದಿ ಸ್ವಯಂವರ, ಪಾಂಡವ-ಕೌರವರ ಚದುರಂಗದಾಟ, ಚದುರಂಗದಾಟದಲ್ಲಿ ಯುದಿಷ್ಠಿರನು ದ್ರೌಪದಿಯನ್ನು ಪಣಕ್ಕಿಟ್ಟಿದ್ದು, ದ್ರೌಪದಿ ವಸ್ತ್ರಾಪಹರಣ, ಶ್ರೀಕೃಷ್ಣನ ಸ್ಮರಣ, ಕುರುಕ್ಷೇತ್ರ ಯುದ್ಧ, ಯುದ್ಧದಲ್ಲಿ ನೆಗೆಯುವ ಕುದುರೆ, ಮದವೇರಿದ ಆನೆ, ಧರ್ಮರಾಜನ ಪಟ್ಟಾಭಿಷೇಕ, ಧರ್ಮರಾಜನ ವಿರಕ್ತಿ ಮತ್ತಿತರ ದೃಶ್ಯಗಳನ್ನು ಕೃತಿ ಆನೆಗುಂದಿ ಅವರು ಕಣ್ಣಿಗೆ ಕಟ್ಟುವಂತೆ ಭರತನಾಟ್ಯ ನೃತ್ಯದ ಮೂಲಕ ಪ್ರದರ್ಶಿಸಿದರು. ಭರತನಾಟ್ಯದಲ್ಲಿ ಪ್ರದರ್ಶಿಸಿದ ಪ್ರತಿಯೊಂದು ಹಾವ-ಭಾವಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಆದಿ ತಾಳದಲ್ಲಿ ಮೂಡಿಬಂದ ಧರು ನೃತ್ಯವು ಕೃತಿ ಅವರ ಕಲೆಯನ್ನು ಓರೆಗೆ ಹಚ್ಚಿದಂತಿತ್ತು.
ಹಿಮ್ಮೇಳನದಲ್ಲಿ ನಟುವಾಂಗದಲ್ಲಿ ಡಾ. ಸಹನಾ ಪ್ರದೀಪ ಭಟ್ಟ, ಗಾಯನವನ್ನು ಬೆಂಗಳೂರಿನ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ವ, ಮೃದಂಗಮ್ಲ್ಲಿ ಧಾರವಾಡದ ವಿದ್ವಾನ್ ಪಂಚಮ ಉಪಾಧ್ಯಾಯ, ತಾಳದಲ್ಲಿ ಬೆಂಗಳೂರಿನ ವಿದ್ವಾನ್ ಡಿ.ವಿ. ಪ್ರಸನ್ನ ಕುಮಾರ ಸಾಥ್ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವೈದ್ಯರಾದ ಡಾ. ಎ.ಎಂ. ಆನೆಗುಂದಿ, ತಮ್ಮ ಮೊಮ್ಮಗಳಾದ ಕೃತಿ ನಾಲ್ಕು ವರ್ಷದಿಂದಲೇ ಭರತನಾಟ್ಯ ಕಲಿಯುತ್ತಿದ್ದಾಳೆ. ಶಿಕ್ಷಣದೊಂದಿಗೆ ಭರತನಾಟ್ಯವನ್ನೂ ಕಲಿಯುವ ಮೂಲಕ ಆಸಕ್ತಿ, ಸತತ ಪ್ರಯತ್ನ ಇದ್ದರೆ ಉನ್ನತ ಸಾಧನೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಡಾ. ರತ್ನಮಾಲಾ ದೇಸಾಯಿ, ರಜನೀಶ ಬಾಲಿ, ಬಾಬುರಾವ ಘಮಟಸಾಲಾ, ಸಾಧನಾ, ಹೇಮಾ ಆಕಳವಾಡಿ, ವಿದ್ವಾನ್ ಉನ್ನತ ಜೈನ್, ಪಿ.ವಿ. ಗೋವಿಂದರಾಜ್, ಎಂ.ಕೆ. ರವೀಂದ್ರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೃತಿ ಅವರ ಪಾಲಕರಾದ ಉದ್ಯಮಿ ವೆಂಕಟೇಶ ಆನೆಗುಂದಿ ಹಾಗೂ ನಂದಾ ಆನೆಗುಂದಿ ಉಪಸ್ಥಿತರಿದ್ದರು.