ಬದಿಯಡ್ಕ: ಕಲೆ, ಸಂಸ್ಕೃತಿಗಳು ಈ ಮಣ್ಣಿನ ಸತ್ವದ ಸಂಕೇತಗಳು. ಅದನ್ನು ಕರಗತಮಾಡಿಕೊಳ್ಳುವುದು ಜೀವಮಾನ ಸಾಧನೆಯಾಗಿದ್ದು, ಅದರಲ್ಲೂ ವಿಶ್ವ ದಾಖಲೆ ನಿರ್ಮಿಸುವುದು ಅತ್ಯಪೂರ್ವ ಎಂದು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಶ್ರೀಮಠದಲ್ಲಿ ನಡೆಯುತ್ತಿರುವ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಭರತನಾಟ್ಯದಲ್ಲಿ ಸಾಧನೆಗೈದ ಮಂಗಳೂರಿನ ರೆಮೋನಾ ಇವೆಟ್ಟ್ ಪೆರೇರಾ ಅವರನ್ನು ಅಭಿನಂದಿಸಿ ಆಶೀರ್ವಚನ ನೀಡಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆಗೈದ ರೆಮೋನಾ ಇವೆಟ್ಟ್ ಪಿರೇರಾ ಅವರನ್ನು ಚಾತುರ್ಮಾಸ್ಯ ಸಾಧನಾ ಪುರಸ್ಕಾರ ನೀಡಿ ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ಪುತ್ತೂರಿನ ಶ್ರೀವೈಷ್ಣವಿ ನಾಟ್ಯಾಲಯದ ಯೋಗೀಶ್ವರಿ ಜಯಪ್ರಕಾಶ್ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಸಮಿತಿ ಜತೆ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿದರು. ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಎಡನೀರು ವಂದಿಸಿದರು. ಬಳಿಕ ವೈಷ್ಣವಿ ನಾಟ್ಯಾಲಯ ಆಶ್ರಯದಲ್ಲಿ ಶ್ರೀರಾಮ ಪುನರಾಗಮನ ನೃತ್ಯ ರೂಪಕ ಹಾಗೂ ನತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. ಡಾ.ರಾಜೇಶ್ ಬೆಜ್ಜಂಗಳ ಅವರ ಸಾಹಿತ್ಯಕ್ಕೆ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರಾಗ ಸಂಯೋಜಿಸಿದ ನೃತ್ಯ ರೂಪಕದಲ್ಲಿ ವೆಳ್ಳಿಕ್ಕೋತ್ ವಿಷ್ಣು ಭಟ್ ಹಾಗೂ ವಸಂತ ಕುಮಾರ್ ಗೋಸಾಡ ಹಾಡುಗಾರಿಕೆಯಲ್ಲಿ, ಗೀತೇಶ್ ಕುಮಾರ್ ನೀಲೇಶ್ವರ ಮೃದಂಗ, ರಾಜಗೋಪಾಲ ಕಾಞಂಗಾಡ್ ಕೊಳಲಲ್ಲಿ ಸಹಕರಿಸಿದರು.