ಜಿಲ್ಲೆ

ಕಾಂಗ್ರೆಸ್‌ನಿಂದ 3500 ಕಿ.ಮೀ ಪಾದಯಾತ್ರೆ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿಕೆ

reportermys

ಮಂಡ್ಯ: ದೇಶದಲ್ಲಿ ಸಹಬಾಳ್ವೆ ಜೀವನ ನಡೆಸಲು ಹಾಗೂ ಸರ್ವಧರ್ಮದ ರಕ್ಷಣೆಗೆ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಉದ್ಯಾನವನದಲ್ಲಿರುವ ಗಾಂಧಿ ಪುತ್ಥಳಿ ಎದುರು ಭಾರತ್ ಜೋಡೊ ಪಾದಯಾತ್ರೆ ಅಂಗವಾಗಿ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ತಮಿಳುನಾಡಿನಿಂದ ಕನ್ಯಾಕುಮಾರಿವರೆಗೂ ನಮ್ಮ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಲು ಜಿಲ್ಲೆಯಿಂದ ಹೊರಡಲು ಚಾಲನೆ ನೀಡಲಾಗಿದೆ. ಅದೇ ರೀತಿ ಕಾಂಗ್ರೆಸ್ ಸದ್ಭಾವನಾ ಕಾರ್ಯಕ್ರಮವನ್ನೂ ನಡೆಸಲಾಗಿದೆ. ಪಾದಯಾತ್ರೆಯನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪಾದಯಾತ್ರೆಯು 3,500 ಕಿ.ಮೀವರೆಗೂ ನಡೆಯಲಿದ್ದು, ಪಾದಯಾತ್ರೆಗೆ ಎಲ್ಲರೂ ಭಾಗವಹಿಸಬೇಕು. ರಾಜ್ಯ ಹಾಗೂ ರಾಷ್ಟ್ರದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಇದರ ಉದ್ದೇಶ ಸಂವಿಧಾನವನ್ನು ಗೌರವಿಸುವುದು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಿನಿಂದ ಸಹಬಾಳ್ವೆ ರೀತಿಯಲ್ಲಿ ಕೊಂಡೊಯ್ಯುವುದಾಗಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಗಣಿಗ ರವಿಕುಮಾರ್‌ಗೌಡ, ಡಾ.ಕೃಷ್ಣ, ಅಂಜನಾ ಶ್ರೀಕಾಂತ್ ಇತರರಿದ್ದರು.
ಇದಕ್ಕೂ ಮುನ್ನ ಜಿಲ್ಲಾ ಕಚೇರಿಯಿಂದ ಮಹಾತ್ಮ ಗಾಂಧಿ ಪುತ್ಥಳಿವರೆಗೂ ಮೆರವಣಿಗೆ ಮಾಡುವ ಮೂಲಕ ಸದ್ಭಾವನಾ ದಿನ ಆಚರಿಸಲಾಯಿತು.