ವಿಜಯಪುರ : ಭಾರತ ಸ್ವಾತಂತ್ರೃದ ಅಮೃತ ಮಹೋತ್ಸವ ಹಿನ್ನೆಲೆ ನಾಗಠಾಣ ವಿಧಾನ ಸಭೆ ಕ್ಷೇತ್ರದಲ್ಲಿ ಶನಿವಾರ ಕಾಂಗ್ರೆಸ್‌ನಿಂದ ಭಾರತ ಜೋಡೊ ಪಾದಯಾತ್ರೆ ಅದ್ದೂರಿಯಾಗಿ ನೆರವೇರಿತು.
ಗಾಂಧಿನಗರ ಸ್ಟಾರ್ ಚೌಕ್ ಮಾರ್ಗವಾಗಿ ಅಕ್ಕಿ ಗೋದಾಮು, ಹಮಾಲ ಕಾಲನಿ, ಯೋಗಾಪುರ ಕಾಲನಿ, ಅಲ್ಲಾಪುರ ತಾಂಡಾದಿಂದ ಸಿಂದಗಿ ನಾಕಾ ಮಾರ್ಗವಾಗಿ ನಾಗಠಾಣ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದವರೆಗೆ ಪಾದಯಾತ್ರೆ ನಡೆಯಿತು. ಮಾರ್ಗದುದ್ದಕ್ಕೂ ದೇಶಪ್ರೇಮದ ಉದ್ಘೋಷಗಳು ಮೊಳಗಿದವು. ತ್ರಿವರ್ಣ ಧ್ವಜಗಳು ರಾರಾಜಿಸಿದವು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರೃ ದೊರೆತಿದೆ. ಅವರು ದೊರಕಿಸಿಕೊಟ್ಟ ಸ್ವಾತಂತ್ರೃದ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು.
ಭಾರತದ ಪ್ರತಿಯೊಬ್ಬ ಪ್ರಜೆಯೂ ಶಾಂತಿ, ನೆಮ್ಮದಿ, ಏಕತೆಯಿಂದ, ಸಾಮರಸ್ಯತೆಯಿಂದ ಬಾಳಬೇಕಾಗಿದೆ. ಈ ದೇಶ ಕಟ್ಟುವಲ್ಲಿ ಸರ್ವ ಸಮಾಜಗಳ ಪಾಲು ಇದ್ದು, ನಾವೆಲ್ಲಾ ಒಂದೇ ತಾಯಿ ಮಕ್ಕಳು ಎಂಬ ಭಾವನೆ ಇರಬೇಕು. ಇಂದು ಕೆಲವು ದುಷ್ಟ ಶಕ್ತಿಗಳು ನಮ್ಮ ನಮ್ಮ ನಡುವೆ ಕಂದಕ ಸೃಷ್ಟಿ ಮಾಡಿ ನಮ್ಮನ್ನು ತಪ್ಪು ದಾರಿಗೆ ಎಳೆಯುವಂತಹ ಕೆಲಸ ಮಾಡುತ್ತಿವೆ. ಇದಕ್ಕೆ ನಾವು ಕಿವಿಗೊಡದೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೂಡಿ ಕೆಲಸ ಮಾಡೋಣ ಎಂದು ಹೇಳಿದರು.
ಮಾಜಿ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ಡಾ. ಬಾಬಾ ಸಾಹೇಬ ಅಂಬೇಡ್ಕರ್, ಮೌಲಾನಾ ಅಬ್ದುಲ್ ಕಲಾಂ, ಇಂದಿರಾ ಗಾಂಧಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯೋಣ. ನಮ್ಮ ಮುಂದಿನ ಪೀಳಿಗೆಗೆ ದೇಶ ಪ್ರೇಮ ಹೇಳಿಕೊಟ್ಟು ನಾವು ಮಾದರಿಯಾಗೋಣ ಎಂದರು.
ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ, ಮಹ್ಮದರಫೀಕ ಟಪಾಲ, ಶಾಹಾಜಾನ ಮುಲ್ಲಾ, ಶಹಾಜಾನ ದುಂಡಸಿ, ಸಂತೋಷ ಪಾಟೀಲ, ಪ್ರಕಾಶಗೌಡ ಪಾಟೀಲ, ಸೋಮನಾಥ ಕಳ್ಳಿಮನಿ, ಇಲಿಯಾಸಪಟೇಲ ಬಗಲಿ, ಸಾಹೇಬಗೌಡ ಬಿರಾದಾರ ತದ್ದೇವಾಡಿ, ಮುದಸ್ಸರ ವಾಲಿಕಾರ, ರಾಜಶೇಖರ ಆವಜಿ, ಕೃಷ್ಣಾ ಕಾಮಟೆ, ಸುಬಾಷ ತಳಕೇರಿ, ಜವ್ಬಾರ ಮುಲ್ಲಾ, ಪೀರಪಾಶಾ ಗಚ್ಚಿನಮಹಲ್, ಶಪೀಕ ಮನಗೂಳಿ, ನಿಂಗಪ್ಪ ಸಂಗಾಪುರ, ರಾಜು ಜಾಧವ, ಹೈದರ ನದಾಫ್, ಹರೀಶ ಕವಲಗಿ ಮತ್ತಿತರರಿದ್ದರು.