ಭದ್ರಾವತಿಯಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಕರ್ನಾಟಕ ಸ್ಟಾರ್ ಸಿಂಗರ್ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.  
ಜಿಲ್ಲೆ

ಭರತ್ ಗಾಯ್ಕವಾಡ್ ಸ್ಟಾರ್ ಸಿಂಗರ್

Shivamogga - Desk - Vinayakumar D B

ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಆಯೋಜಿಸಿದ್ದ ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-1ರಲ್ಲಿ ನಗರದ ಭರತ್ ಆರ್.ಗಾಯ್ಕವಾಡ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟಾರೆ 80 ಸ್ಪರ್ಧಿಗಳು ಆಡಿಷನ್‌ನಲ್ಲಿ ಭಾಗವಹಿಸಿದ್ದು 40 ಮಂದಿ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಇದರಲ್ಲಿ 16 ಸ್ಪರ್ಧಿಗಳು ಅಂತಿಮ ಸುತ್ತು ಪ್ರವೇಶಿಸಿದ್ದರು. ಅಂತಿಮವಾಗಿ ಭರತ್ ಆರ್.ಗಾಯ್ಕವಾಡ್ ಮೊದಲ ಸ್ಥಾನ ಗಳಿಸಿದರೆ, ಗದಗದ ಚನ್ನಪ್ಪ ಹಾಗೂ ನಗರದ ಅನುಷಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು. ಇಬ್ಬರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಗಾಯಕರಾದ ಕೆ.ಗುರುರಾಜ್, ಅಜಯ್ ವಾರಿಯರ್, ಸುರೇಖಾ ಹೆಗಡೆ, ಸಂಗೀತ ಶಿಕ್ಷಕರಾದ ಮಹೇಂದ್ರ ಗೋರೆ, ಉಮಾ ಪಾಲ್ಗೊಂಡಿದ್ದರು.

ಲಕ್ಕಿ ಡಿಪ್‌ನಲ್ಲಿ ಬಿ.ಎಂ.ಮನು 5 ಗ್ರಾಂ ಚಿನ್ನದ ನಾಣ್ಯ, ಬಿ.ಸಿ.ದಿವ್ಯಾ 100 ಗ್ರಾಂ ಬೆಳ್ಳಿ ನಾಣ್ಯ ಹಾಗೂ ಸುಷ್ಮಾ 50 ಗ್ರಾಂ ಬೆಳ್ಳಿ ನಾಣ್ಯ ಪಡೆದರು. ಸಂಘದ ಗೌರವ ಸಲಹೆಗಾರ ಬಿ.ಆರ್.ವಿಕ್ರಂ, ಗೌರವಾಧ್ಯಕ್ಷ ಬಿ.ಲೋಕನಾಥ್ ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗಾಯನ ಕ್ಷೇತ್ರದ ಜೀವಮಾನ ಸಾಧನೆಗಾಗಿ ವೀಣಾ ಲೋಕನಾಥ್‌ಗೆ ಜಯಶೀಲನ್ ಪ್ರಶಸ್ತಿ, ಕೀಬೋರ್ಡ್ ವಾದಕ ಮ್ಯಾಥ್ಯುಗೆ ಶ್ರೀನಿವಾಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನ ಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾವಿದರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಚಿದಾನಂದ, ಸಹ ಕಾರ್ಯದರ್ಶಿ ಚರಣ್ ಕವಾಡ್, ಸದಸ್ಯರಾದ ಶಂಕರ್‌ಬಾಬು, ವೈ.ಕೆ.ಹನುಮಂತಯ್ಯ ಇತರರಿದ್ದರು.