ಜಿಲ್ಲೆ

ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿದ್ದು ಹೈಕಮಾಂಡ್

ಹುಬ್ಬಳ್ಳಿ : ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಅನ್ನು ತಮ್ಮ ಪುತ್ರನಿಗೆ ನೀಡುವುದು ಬೇಡವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಹೈಕಮಾಂಡ್​ಗೆ ಮನವಿ ಮಾಡಿದ್ದರು. ಆದರೂ, ಭರತ್ ಬೊಮ್ಮಾಯಿ ಗೆಲ್ಲುವ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಪಕ್ಷದ ಪ್ರಮುಖರ ತೀರ್ಮಾನ ತಿರಸ್ಕರಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹಿಸುವುದಿಲ್ಲ. ಆದರೆ, ಪಕ್ಷದ ಮುಖಂಡರೇ ಗೆಲ್ಲುವ ಅಭ್ಯರ್ಥಿಯನ್ನು ತೀರ್ವನಿಸಿದಾಗ ಏನೂ ಮಾಡಲು ಆಗುವುದಿಲ್ಲ ಎಂದರು.

ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ಶಿಸ್ತಿನ ಸಿಪಾಯಿ. ಇಲ್ಲಿ ಕುಟುಂಬ ರಾಜಕಾರಣದ ಮಾತು ಬರುವುದಿಲ್ಲ ಎಂದು ಹೇಳಿದರು.

ಉಪ ಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಎನ್​ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದ ಜನರು ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ಪರ ವಾತಾವರಣ ಇದೆ ಎಂದರು.

ಬಿಜೆಪಿಯ 8 ಶಾಸಕರು ಕಾಂಗ್ರೆಸ್​ಗೆ ಹೋಗುತ್ತಾರೆಂಬ ಶಾಸಕ ಎಸ್.ಟಿ. ಸೋಮಶೇಖರ ಅವರ ಹೇಳಿಕೆಗೆ ಪ್ರಾಮುಖ್ಯತೆ ಕೊಡುವ ಅಗತ್ಯತೆ ಇಲ್ಲ. ಅವರು ಬಿಜೆಪಿಯಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ 8 ಶಾಸಕರ ಹೆಸರುಗಳನ್ನು ಎಸ್.ಟಿ. ಸೋಮಶೇಖರ ಸ್ಪಷ್ಟವಾಗಿ ಹೇಳಲಿ. ಅದನ್ನು ಬಿಟ್ಟು ಕೇವಲ ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಎಸ್.ಟಿ. ಸೋಮಶೇಖರಗೂ, ನನಗೂ ಹೋಲಿಸುವುದು ಸರಿಯಲ್ಲ. ಹಾಗಿದ್ದರೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೆ ಶಿಗ್ಗಾಂವಿಗೆ ಏಕೆ ಬರುತ್ತಿದ್ದೆ ? ಎಂದು ಪ್ರಶ್ನಿಸಿದ ಬೈರತಿ ಬಸವರಾಜ, ಶಿಗ್ಗಾಂವಿ ನಂತರ ಸಂಡೂರಗೆ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದರು.