ಭರಮಸಾಗರ: ಲಾಕ್‌ಡೌನ್ ಸಡಿಲಿಕೆಯಿಂದ ಪಟ್ಟಣದ ಚಟುವಟಿಕೆ ಸಹಜ ಸ್ಥಿತಿಗೆ ಮರಳಿದ್ದು, ಸೋಮವಾರ ಮದ್ಯ ಮಾರಾಟಕ್ಕೂ ಅವಕಾಶ ಸಿಕ್ಕಿದ್ದರಿಂದ ಮದ್ಯಪ್ರಿಯರಿಗೆ ಜೀವ ಬಂದಂತಾಗಿತ್ತು.
ಹೋಟೆಲ್ ಹೊರತುಪಡಿಸಿ ಪ್ರಮುಖ ರಸ್ತೆ, ವೃತ್ತಗಳಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಜನತೆ ಬೈಕ್, ಕಾರು ಇತರ ವಾಹನಗಳಲ್ಲಿ ನಿರಾಳವಾಗಿ ಸಂಚರಿಸುತ್ತಿದ್ದರು. ಬಸ್ ಸಂಚಾರ ಇಲ್ಲವೆಂಬ ಮಾಹಿತಿ ಇದ್ದರೂ ಚಿತ್ರದುರ್ಗಕ್ಕೆ ಹೋಗುವವರು ಬಸ್ಸು ಬರಬಹುದೆಂಬ ನಿರೀಕ್ಷೆಯಲ್ಲಿ ಕಾದುನಿಂತಿದ್ದರು.
ಬ್ಯಾಂಕ್, ಪಡಿತರ ಅಂಗಡಿಯ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಿಳಿಚೋಡು ರಸ್ತೆಯಲ್ಲಿನ ವೈನ್‌ಶಾಪ್ ಬಾಗಿಲು ತೆರೆದಿದ್ದರಿಂದ ಹೋಬಳಿಯ ವಿವಿಧೆಡೆಯಿಂದ ಮದ್ಯ ಪ್ರಿಯರು ಆಗಮಿಸಿ ಸರತಿ ಸಾಲಲ್ಲಿ ನಿಂತು ಮದ್ಯ ಖರೀದಿಸಿದರು. ಮಹಿಳೆಯರು ಸರದಿಯಲ್ಲಿ ನಿಂತಿದ್ದು ಗಮನಸೆಳೆಯಿತು.