ಭರಮಸಾಗರ: ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿ ಮತ ಚಲಾಯಿಸಿದರು.
ನಂತರ ಮಾತನಾಡಿದ ಶ್ರೀಗಳು, ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರೂ ಸಹ ಚುನಾವಣೆಗಳಲ್ಲಿ ಮತ ಚಲಾಯಿಸಲು ಮುಂದೆ ಬಾರದೆ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿ ಇರುವ ಜನರು ಯಾರಿಂದಲೂ ಹೇಳಿಸಿಕೊಳ್ಳದೆ ತಾವೇ ಸ್ವಯಂ ಪ್ರೇರಣೆಯಿಂದ ಮತದಾನ ಮಾಡಬೇಕು. ನಾಡಿನ ಒಳ್ಳೆಯ ನೇತಾರರನ್ನು ಆಯ್ಕೆ ಮಾಡುವ ಹೊಣೆಗಾರಿಕೆ ವಿದ್ಯಾವಂತರದ್ದಾಗಿದೆ ಎಂದರು.
ಸರ್ಕಾರದ ಮಟ್ಟದಲ್ಲಿಯೇ ಕಡ್ಡಾಯ ಕಾನೂನು ತಂದು ಚುನಾವಣೆಯಲ್ಲಿ ಮತ ಚಲಾಯಿದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಒದಗಿಸಬೇಕು. ಮತದಾನ ಮಾಡದೇ ಇರುವ ನೌಕರರಿಗೆ ವೇತನ ಭಾಗವನ್ನು ಕಡಿತಗೊಳಿಸಬೇಕು ಎಂದರು.