ಭರಮಸಾಗರ: ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯಾಪಾರ ವಹಿವಾಟು ಮಾಡುವ ಮೂಲಕ ಸಹಕರಿಸಬೇಕು ಎಂದು ಸಿಪಿಐ ಬಿ.ವಿ.ಗಿರೀಶ್ ಅವರು ಅಂಗಡಿ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ಸಂಚಾರ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿ, ಹಳೇ ಬಸ್ ನಿಲ್ದಾಣ, ವಿನಾಯಕ ಚಿತ್ರಮಂದಿರದ ಮುಖ್ಯ ರಸ್ತೆ, ಬಿಳಿಚೋಡು, ಬಿದರಿಕೆರೆ ಸಂಪರ್ಕ ರಸ್ತೆಯ ಹಾಗೂ ಮುಖ್ಯ ವೃತ್ತದ ಬಳಿ ರಸ್ತೆಯ ಮೇಲೆ ಅಂಗಡಿ ಸಾಮಗ್ರಿಗಳನ್ನಿಟ್ಟು ವ್ಯಾಪಾರ ಮಾಡುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಹಲವು ಬಾರಿ ತಿಳಿವಳಿಕೆ ನೀಡಿದ್ದರೂ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ವ್ಯಾಪಾರ ವಹಿವಾಟು ಮಾಡುತ್ತಿರುವ ವರ್ತಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೂ ಮೊದಲು ಠಾಣೆಯಲ್ಲಿ ಆಟೋ ಚಾಲಕರು, ಾಲೀಕರ ಸಭೆ ನಡೆಸಿ ಆಟೋಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಳ್ಳಬಾರದು. ನಿಯಮದ ಪ್ರಕಾರ ವಾಹನ ಚಾಲನಾ ಪರವಾನಗಿ, ವಾಹನ ವಿಮೆ, ವಾಹನದ ದಾಖಲಾತಿ ಸಿದ್ಧವಿರಬೇಕು ಎಂದು ಸೂಚಿಸಿದರು. ಪಿಎಸ್‌ಐ ರಾಜು, ಪ್ರೊಬೇಷನರಿ ಪಿಎಸ್‌ಐ ಬಾಹುಬಲಿ, ಪೊಲೀಸ್ ಸಿಬ್ಬಂದಿ ಇದ್ದರು.