ಭಂಡಾರಕೇರಿ ಮಠದಲ್ಲಿ ಮಧ್ವ ನವಮಿ ಸಂಭ್ರಮ
ಬೆಂಗಳೂರು: ದ್ವೈತ ಮತ ಸಿದ್ಧಾಂತ ಪ್ರತಿಪಾದಿಸಿದ ಆಚಾರ್ಯ ಶ್ರೀ ಮಧ್ವರ ತತ್ವ ಮತ್ತು ಸಂದೇಶಗಳು ಎಲ್ಲ ದೇಶ- ಕಾಲಕ್ಕೂ ಅನ್ವಯ ಎಂದು ಉಡುಪಿ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು. ಮಧ್ವ ನವಮಿ ಅಂಗವಾಗಿ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಮಧ್ವ ನವಮಿ ಉತ್ಸವ ಅಂಗವಾಗಿ ವಿದ್ವಜ್ಜನರಿಗೆ ಗೌರವಿಸಬೇಕು. ಆಚಾರ್ಯರ ಸಂದೇಶ ಪ್ರಸಾರ ಮಾಡಬೇಕು. ಆಗ ಮಾತ್ರ ಉತ್ಸವ, ಗುರು ಸ್ಮರಣೆ, ಆರಾಧನೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಪ್ರಶಸ್ತಿ ಪ್ರದಾನ: ವೀಣಾ ವಿದುಷಿ, ಸಂಗೀತ ಸಂಯೋಜಕಿ ಮತ್ತು ಗಾಯಕಿ ವಿದುಷಿ ಶುಭಾ ಸಂತೋಷ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲೇ ವೀಣಾ ವಾದನ ಸೇವೆ ಸಮರ್ಪಿಸಿ ಕರ್ನಾಟಕದ ಕೀರ್ತಿಯನ್ನು ಬೆಳಗಿದ ಸವಿ ನೆನಪಿಗಾಗಿ ಅವರಿಗೆ ‘ರಾಮ ಲಾಲಿತ ವೀಣಾ ಮಾನ್ಯ’ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿ ಗೌರವಿಸಿದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ, ವ್ಯಾಕರಣ, ನ್ಯಾಯ ಶಾಸ್ತ್ರ ಪಂಡಿತ ಕೆಂಪದಾಳಿಹಳ್ಳಿ ಕೃಷ್ಣಾಚಾರ್ಯ ಅವರಿಗೆ ‘ಮಧ್ವ ವಿದ್ಯಾಮಾನ್ಯ’ ಬಿರುದು ಪ್ರದಾನ ಮಾಡಿ ಸನ್ಮಾನಿಸಿದರು. ಕೆಎಎಸ್ ಅಧಿಕಾರಿ ಅನಿಲ್ ಕುಮಾರ ಮರಳಿ ಇತರರು ಇದ್ದರು.