ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ನಾಗಭೂಷಣ ಮಾಮಡಿ, ರಾಜಪ್ಪ ಪಾಟೀಲ್, ಜಯರಾಜ ದಾಬಶೆಟ್ಟೆ, ಚಂದ್ರಶೇಖರ ಎಮ್ಮೆ, ಅಶೋಕ ರಾಜೋಳೆ ಇದ್ದರು. 
ಜಿಲ್ಲೆ

ಪತ್ರಿಕಾ ವಿತರಕರ ಕಾಯಕ ಶ್ರೇಷ್ಠವಾದದ್ದು

ರಾಜು ಯಮಕನಮರಡಿ

ಭಾಲ್ಕಿ: ರಾಜ್ಯದಲ್ಲಿ ಹಲವಾರು ಪತ್ರಿಕೆಗಳಿದ್ದು, ಮಳೆ-ಚಳಿಯಲ್ಲಿಯೂ ಪ್ರತಿನಿತ್ಯ ಮನೆ-ಮನೆಗೂ ಓದುಗರಿಗೆ ಮುಟ್ಟಿಸುವ ಪತ್ರಿಕಾ ವಿತರಕರ ಕಾಯಕ ಶ್ರೇಷ್ಠವಾದದ್ದು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನ ಸಮಾರಂಭದಲ್ಲಿ ವಿತರಕರನ್ನು ಸನ್ಮಾನಿಸಿ, ಮಾತನಾಡಿದ ಶ್ರೀಗಳು, ವರದಿಗಾರರು ಆಯಾ ದಿನದ ಘಟನೆಗಳನ್ನು ಸುದ್ದಿ ಮಾಡುತ್ತಾರೆ. ಪತ್ರಿಕಾ ಕಚೇರಿಯಲ್ಲಿ ವರದಿ ಪರಿಶೀಲಿಸಿ ಅಂತಿಮ ರೂಪ ಕೊಟ್ಟು ಪತ್ರಿಕೆ ರೂಪಿಸುತ್ತಾರೆ. ಆದರೆ ಪತ್ರಿಕೆಯನ್ನು ತಲುಪಿಸುವ ಮಹತ್ವದ ಕಾರ್ಯ ವಿತರಕರದ್ದಾಗಿದೆ. ಅವರ ಸೇವೆ ಯಾವ ಸೇವೆಗಿಂತಲೂ ಕಡಿಮೆ ಇಲ್ಲ. ವಿತರಕರು ತಮ್ಮ ಕಾಯಕದ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಜಗತ್ತಿನ ಪ್ರಚಲಿತ ವಿದ್ಯಮಾನಗಳನ್ನು ಅವಿರತವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಿಕಾ ವಿತರಕರ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಹಿರಿಯ ಪತ್ರಕರ್ತರಾದ ಅಶೋಕ ರಾಜೋಳೆ, ಚಂದ್ರಶೇಖರ ಎಮ್ಮೆ, ಭದ್ರೇಶ ಸ್ವಾಮಿ ಇತರರಿದ್ದರು.

ಗುರುಪ್ರಸಾದ ಶಾಲೆಯ ಮುಖ್ಯಗುರು ಬಾಬು ಬೆಲ್ದಾಳ ನಿರೂಪಣೆ ಮಾಡಿ ವಂದಿಸಿದರು.

ಸನ್ಮಾನ: ಪತ್ರಿಕೆ ವಿತರಕರಾದ ರಾಜಗುರು ಮಹಾಗಾಂವೆ, ಫಯಾಜಮಿಯಾ ಪಟೇಲ್, ದಿಲೀಪ ಚನ್ನಾಳೆ, ಪ್ರಕಾಶ ಖರ್ಗೆ ಮತ್ತು ಮಾರ್ಕ್ ಬಸನೂರ ಅವರನ್ನು ಶ್ರೀಮಠದ ಪರವಾಗಿ ಪುಜ್ಯರು ಸನ್ಮಾನಿಸಿ, ಗೌರವಿಸಿದರು.