ಭಾಲ್ಕಿಯ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ್ ಮಾತನಾಡಿದರು. ಉಪಾಧ್ಯಕ್ಷ ಶೇಕ್ ಅಬ್ದುಲ್ ನಸೀರ್, ತಾಪಂ ಇಒ ಸೂರ್ಯಕಾತ ಬಿರಾದಾರ ಇದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿ

ರಾಜು ಯಮಕನಮರಡಿ


ಭಾಲ್ಕಿ: ತಾಲೂಕಿನ ಎಲ್ಲ ಜನರಿಗೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕೆಲಸ ಆಗಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡ ಜನರ ಕಲ್ಯಾಣ, ಆರ್ಥಿಕ ಪ್ರಗತಿಗಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಗೃಹ ಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಯುವ ನಿಧಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿತು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದೆ. ಈ ಐದು ಯೋಜನೆಗಳಿಂದ ಬಡ ಜನರು ಆರ್ಥಿಕವಾಗಿ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ತಾಲೂಕಿನಲ್ಲಿಯು ಕೂಡ ಐದು ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿವೆ. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನ ೬೧೭೮೭ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ ೫೬೨೦೪ ಮಹಿಳೆಯರು ಪ್ರತಿ ತಿಂಗಳು ಎರಡು ಸಾವಿರ ರೂ. ಹಣ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ೯೦ ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಬಸ್‌ನ ಸೌಲಭ್ಯ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ೫೨೨೭೯ ಗ್ರಾಹಕರು ಪ್ರತಿ ತಿಂಗಳ ೨೦೦ ಯುನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಯುವ ನಿಧಿ ಯೋಜನೆಯಡಿ ೧೧೭೨ ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿದ್ದು ಆ ಪೈಕಿ ೧೧೩೪ ಯುವಕರು ನಿರುದ್ಯೋಗ ಭತ್ಯೆ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಕೂಡ ಅರ್ಹ ಫಲಾನುಭವಿಗಳ ಖಾತೆಗೆ ಅಕ್ಕಿ ಬದಲಾಗಿ ನಗದು ಹಣ ವರ್ಗಾಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇನ್ನೂ ಕೆಲವರಿಗೆ ವಿವಿಧ ಕಾರಣಗಳಿಂದ ಗ್ಯಾರಂಟಿ ಯೋಜನೆ ಲಾಭ ಸಿಗುತ್ತಿಲ್ಲ ಅಂತಹವರನ್ನು ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಗುರುತಿಸಿ ಎಲ್ಲರಿಗೂ ಗ್ಯಾರಂಟಿ ಯೋಜನೆ ಲಾಭ ತಲುಪಿಸಬೇಕು ಎಂದು ಹೇಳಿದರು.

ತಾಪಂ ಇಒ ಸೂರ್ಯಕಾಂತ ಬಿರಾದಾರ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷ ಶೇಕ್ ಅಬ್ದುಲ್ ನಸೀರ್, ಸದಸ್ಯರಾದ ವಿಲಾಸ ಪಾಟೀಲ್, ಧನರಾಜ ಪಾಟೀಲ್, ಸಂಗಮೇಶ ವಾಲೆ, ಓಂಕಾರ ರಾಮಶೆಟ್ಟೆ, ಪಾಂಡುರಂಗ ಕಣಜೆ, ಜಯಶ್ರೀ ಮಾನಕಾರಿ, ದಿಲೀಪ ಪಾಟೀಲ್, ಸಂಜೀವಕುಮಾರ ಶರಣಪ್ಪ, ಮಂಗಳಾ ಬಾಬುರಾವ, ಶಶಿ ರಾಠೋಡ್, ಸತೀಶ ಮಾಳಗೆ, ಕೈಲಾಸ ಶಿವಾಜಿ, ಗೋಪಾಲ ಸೂರ್ಯವಂಶಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಲೂಕಿನ ಎಲ್ಲ ಹೋಬಳಿ, ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಜಾಗೃತಿ ಮೂಡಿಸಿ ಎಲ್ಲರಿಗೂ ಗ್ಯಾರಂಟಿ ಯೋಜನೆ ಲಾಭ ಸಿಗುವಂತೆ ನೋಡಿಕೊಳ್ಳಬೇಕು.
| ಹಣಮಂತರಾವ ಚವ್ಹಾಣ್ ಅಧ್ಯಕ್ಷ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಭಾಲ್ಕಿ