ಜಿಲ್ಲೆ

ಹಿರೇಮಸಳಿಯಲ್ಲಿ ಮೇಳೈಸಿದ ಭಕ್ತಿ ಭಾವ, ಶ್ರೀಶೈಲ ಪಾದಯಾತ್ರೆಗೆ ಅದ್ದೂರಿ ಚಾಲನೆ, ಹೇಗಿತ್ತು ಗೊತ್ತಾ ಮೆರವಣಿಗೆ ಝಲಕ್?

ಇಂಡಿ: ಗೊಂಬೆ ಕುಣಿತ, ಡೊಳ್ಳು ಮೆರವಣಿಗೆ, ಚಿಟ್ಟಹಲಿಗೆ ಮೇಳ, ಭಜನೆ, ಪರಶಿವನ ಉದ್ಘೋಷದೊಂದಿಗೆ ಶ್ರೀಶೈಲ ಶ್ರೀ ಚನ್ನಮಲ್ಲಿಕಾರ್ಜುನನ ಕಂಬಿ ಮೆರವಣಿಗೆ ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಬುಧವಾರ ನಡೆದ ಶ್ರೀಶೈಲ ಚನ್ನಮಲ್ಲಿಕಾರ್ಜುನ ಪುರಾಣ ಮಂಗಲೋತ್ಸವ, ಕಂಬಿ ಮೆರವಣಿಗೆ, ಪಾದಯಾತ್ರೆಗೆ ಚಾಲನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು. ಸಾರವಾಡದ ಗೊಂಬೆ ಕಲಾವಿದರ ಬಳಗ ಹಾಗೂ ಸಂಗೋಗಿಯ ಡೊಳ್ಳು ಕುಣಿತ ಕಲಾವಿದರು ಮೆರವಣಿಗೆಯ ಆಕರ್ಷಣೆಯಾಗಿದ್ದರು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆಯೊಂದಿಗೆ ಚಾಲನೆ ಪಡೆದುಕೊಂಡ ಕಾರ್ಯಕ್ರಮ ಇಡೀ ದಿನ ನಡೆದು ಸಂಜೆ ಯಾತ್ರಾರ್ಥಿಗಳ ಬೀಳ್ಕೊಡುಗೆಯೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆಯಿಂದ ಸಂಜೆವರೆಗೆ ಮೆರವಣಿಗೆ, ಭಜನೆ, ದಾಸೋಹ ಕಾರ್ಯಗಳು ಸಾಂಗವಾಗಿ ನೆರವೇರಿದವು. ಮನೆ ಮನೆಯಲ್ಲಿ ಕಂಬಿ ಪೂಜೆ ಭಕ್ತಿ ಭಾವದಿಂದ ನೆರವೇರಿತು.

ಮಲ್ಲಯ್ಯನ ದೇವಸ್ಥಾನದಿಂದ ಆರಂಭಗೊಂಡ ಕಂಬಿ ಮೆರವಣಿಗೆ ಲಕ್ಷ್ಮಿ ದೇವಸ್ಥಾನ, ಶರಣಬಸವೇಶ್ವರ ದೇವಸ್ಥಾನ, ಸಿದ್ಧೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿತು. ಬಳಿಕ ಭಕ್ತರ ಮನೆಯಲ್ಲಿ ನಡೆದ ಕಂಬಿ ಪೂಜೆ ವೇಳೆ ಯಾತ್ರಾರ್ಥಿಗಳಿಗೆ ಫಲಾಹಾರ ನೀಡಿ ಸತ್ಕರಿಸಲಾಯಿತು. ರೈತರು ತಾವು ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಬಾಳೆ, ಪೇರಲ ನೀಡಿ ಭಕ್ತಿ ಸಮರ್ಪಿಸಿದರು. ಸಿರಿಧಾನ್ಯಗಳಿಂದ ತಯಾರಿಸಿದ ಕಿಚಡಿ, ಅಂಬಲಿ ನೀಡಿ ಸೇವೆ ಸಲ್ಲಿಸಿದರು. ಖರ್ಜೂರ, ಕಡಲೆ ಬೇಳೆ, ಬೆಲ್ಲ, ಸಕ್ಕರೆ ಹಂಚಿ ತಮ್ಮ ಭಕ್ತಿ ಭಾವ ಪತ್ರದರ್ಶಿಸಿದರು.

ಶಿಕ್ಷಕ ಐ.ಎಸ್. ಮಾಶ್ಯಾಳ, ಭೀಮರಾಯ ಮೇತ್ರಿ, ಪೀರು ಮನಮಿ, ಧರೆಪ್ಪ ಚಾಂದಕವಟೆ, ಗೌಡಪ್ಪ ಬೋರುಟಗಿ ನಿರ್ವಹಿಸಿದರು. ಶ್ರೀಶೈಲ ಮಲ್ಲಿಕಾರ್ಜುನ ಸಮಿತಿ ಅಧ್ಯಕ್ಷ ಚಿದಾನಂದ ಭಾವಿಕಟ್ಟಿ, ಉಪಾಧ್ಯಕ್ಷ ಶ್ರೀಶೈಲ ತಳವಾರ, ಅಶೋಕ ಮೋಟಗಿ, ಅನೀಲ ಶಿವಣಗಿ, ಈರಣ್ಣ ಸರಸಂಬಿ, ಈರಣ್ಣ ಖ್ಯಾಡಗಿ, ಸಂಜೀವ ಮಲಕಗೊಂಡ, ಮುತ್ತಪ್ಪ ಹಂಜಗಿ, ಅಷ್ಪಾಕ ನಾಟಿಕಾರ, ಶರಣಪ್ಪ ಮಾಶ್ಯಾಳ, ಭೀಮರಾಯ ಮೇತ್ರಿ, ಪೀರು ಮನಮಿ, ಧರೆಪ್ಪ ಚಾಂದಕವಟೆ, ಗೌಡಪ್ಪ ಬೋರುಟಗಿ ಮತ್ತಿತರರಿದ್ದರು. ಪತ್ರಕರ್ತ ಪರಶುರಾಮ ಭಾಸಗಿ ಹಾಗೂ ಅಪ್ಪಾಸಿ ಬೆನಕನಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.