ಜಿಲ್ಲೆ

ಅಧ್ಯಾತ್ಮ ಜೀವನವೇ ಅಂತಿಮವಾದ ಸತ್ಯ...

ಸುಗುಣೇಂದ್ರ ಸ್ವಾಮೀಜಿ ಆಶೀರ್ವಚನ

ಭಕ್ತಿರಸ ಸಿಂಚನ ಪುಸ್ತಕ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಮೆರಿಕದಲ್ಲಿರುವ ಭಾರತೀಯರು ಇಂದು ಜೀವನದ ಸತ್ಯ ಕಂಡುಕೊಂಡಿದ್ದಾರೆ. ವಿದೇಶದಲ್ಲಿದ್ದರೆ ಎಲ್ಲ ಬಗೆಯ ಸುಖವೂ ಲಭ್ಯ ಎಂಬ ಭ್ರಮಾಲೋಕದಿಂದ ಅವರು ಹೊರಬಂದಿದ್ದಾರೆ. ಇದೀಗ ಅಮೆರಿಕದಲ್ಲೂ ಸಹ ಭಕ್ತಿಯ ಉದಯ ಆಗುತ್ತಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರದ ಕುರಿತು ಅಲ್ಲೊಂದು ಹೊಸ ಅಲೆ ಏಳುತ್ತಿದೆ. ಅಧ್ಯಾತ್ಮ ಜೀವನವೇ ಅಂತಿಮ ಸತ್ಯ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಹಾಗೂ ಕಸಾಪ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೆರಿಕದ ಪ್ರಶಾಂತಕುಮಾರ್​ ಮಟ್ಟು ವಿರಚಿತ ಭಕ್ತಿರಸ ಸಿಂಚನ ಭಕ್ತೀಗಿತೆಗಳ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ವಿಶ್ವದಲ್ಲಿ ಅಧ್ಯಾತ್ಮ ಯುಗ ಪ್ರಾರಂಭ

ಕೆಲವರು ಹೇಳುವಂತೆ ವಿಶ್ವದಲ್ಲಿನ್ನು ಅಣು ಯುಗ, ವಿಜ್ಞಾನದ ಯುಗ ಮುಗಿಯಿತು. ಇನ್ನೇನಿದ್ದರೂ ಅಧ್ಯಾತ್ಮ ಯುಗ ಪ್ರಾರಂಭ. ಅದರ ಪ್ರತಿರೂಪವೇ ಅಮೆರಿಕದಲ್ಲಿ ನೆಲೆಸಿರುವ ಪ್ರಶಾಂತ ಮಟ್ಟು ಅವರಿಂದ ರಚಿತ ಭಕ್ತಿರಸ ಸಿಂಚನ ಭಕ್ತೀಗಿತೆ ಪುಸ್ತಕವೇ ನಿದರ್ಶನ. ಅಮೆರಿಕದಲ್ಲೀಗ ಎಲ್ಲ ದಾಸರು, ಜಯತೀರ್ಥರು, ವಾದಿರಾಜ ಹಾಗೂ ವ್ಯಾಸರಾಜರು ಹೀಗೆ ಎಲ್ಲರ ಆರಾಧನೆ ನಡೆಯುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಕಳೆದ ವರ್ಷ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಅಮೆರಿಕವೂ ಸಹ ಕೆಲವರ್ಷದಲ್ಲಿ ಕೃಷ್ಣಮಯ ಆಗಲಿದೆ ಎಂದರು.

ಪುತ್ತಿಗೆ ಮಠದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ವಿದೇಶ ಕಾರ್ಯದರ್ಶಿ ವಿದ್ವಾನ್​ ಪ್ರಸನ್ನ ಆಚಾರ್ಯ ಶುಭಾಶಂಸನೆ ನೆರವೇರಿಸಿದರು. ಯಕ್ಷಗಾನ ಅರ್ಥಧಾರಿ ವೆಂಕಟರಮಣ ಭಟ್​ ಸುಳ್ಯ, ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ., ಸಾಹಿತಿಯ ತಂದೆ, ಖ್ಯಾತ ನಾಗಪಾತ್ರಿ ಲಕ್ಷ್ಮಣ ರಾವ್​, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಉಪಸ್ಥಿತರಿದ್ದರು.

ನೂರಾರು ಮಹಿಳೆಯರಿಂದ ಶತಕಂಠ ಗಾಯನ

ಭಕ್ತಿರಸ ಸಿಂಚನ ಗೀತೆಗಳನ್ನು ವಿದುಷಿ ಉಷಾ ಹೆಬ್ಬಾರ್​ ನೇತೃತ್ವದಲ್ಲಿ ನೂರಾರು ಮಹಿಳೆಯರು ಭಕ್ತಿಯಿಂದ ನರ್ತಿಸುತ್ತ, ವಿಶಿಷ್ಟ ರೀತಿಯಲ್ಲಿ ಶತಕಂಠದಲ್ಲಿ ಗಾಯನ ಮಾಡಿದರು.

ಕೃತಿಯ ಸಾಹಿತಿ ಪ್ರಶಾಂತಕುಮಾರ್​ ಮಟ್ಟು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಂಪೂರ್ಣಾ ರಾವ್​ ಕವಿಗಳ ಪರಿಚಯ ಮಾಡಿದರು. ಪೂರ್ಣಿಮಾ ಜನಾರ್ದನ್​ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಉಡುಪಿ ಘಟಕದ ಗೌರವ ಕಾರ್ಯದರ್ಶಿ ಜನಾರ್ದನ್​ ಕೊಡವೂರು ವಂದಿಸಿದರು.

ಕಾವ್ಯಯೋಗದಿಂದ ಭಗವಂತನ ಒಲುಮೆ

ಕೃತಿ ಪರಿಚಯ ಮಾಡಿದ ಮೈಸೂರಿನ ಹಿರಿಯ ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್​ ಮಾತನಾಡಿ, ಕಾವ್ಯ ಎನ್ನುವುದು ಒಂದು ಯೋಗ. ಭಗವಂತನು ಯೋಗದ ಅನೇಕ ಆಯಾಮ ಅರುಹಿದ್ದಾನೆ. ಅದರಲ್ಲಿ ಜ್ಞಾನಯೋಗವೂ ಒಂದಾಗಿದ್ದು, ಅದರೊಂದಿಗೆ ಭಕ್ತಿಯೋಗ ಸಮ್ಮಿಳಿತವಾದರೆ ಕಾವ್ಯಯೋಗವಾಗುತ್ತದೆ. ಈ ಶ್ರೇಷ್ಠ ಯೋಗದ ಮೂಲಕ ಭಗವಂತನನ್ನು ಸ್ತುತಿಸುವುದು, ಒಲಿಸಿಕೊಳ್ಳುವುದು ಸುಲಭ. ಆದರೆ, ಕಾವ್ಯ ಯೋಗವು ಅಷ್ಟಾಂಗ ಯೋಗದಂತೆ ಬಹಳ ಕಷ್ಟಕರ. ಇದನ್ನು ಮೈಗೂಡಿಸಿಕೊಳ್ಳಲು ಪಾಂಡಿತ್ಯ, ಸತತ ಪರಿಶ್ರಮ-ಅಧ್ಯಯನ, ತಪಸ್ಸು, ಪ್ರತಿಭೆಯೂ ಬೇಕು. ಆಗಲೇ ಕಾವ್ಯವು ತನ್ನ ರಹಸ್ಯವನ್ನು ತೆರೆದುಕೊಳ್ಳುತ್ತದೆ. ಅಮೆರಿಕದಲ್ಲಿದ್ದರೂ ಪ್ರಶಾಂತ ಅವರು ತನ್ನ ಮೊದಲ ಹೆಜ್ಜೆಯನ್ನು ದಾಸ ಸಾಹಿತ್ಯದ ಪುಣ್ಯಭೂಮಿಯಾದ ಉಡುಪಿಯಲ್ಲಿ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಆರಂಭಿಸಿದ್ದು, ಅವರ ಕಾವ್ಯಯಾತ್ರೆ ಸಾರ್ಥಕವಾಗಲಿ ಎಂದರು.
ಅಮೆರಿಕದಲ್ಲಿ ಮೊದಲ ಬಾರಿಗೆ ಪ್ರಶಾಂತ ಮಟ್ಟು ನೂತನ ಹರಿದಾಸರಾಗಿದ್ದಾರೆ. ಅವರೀಗ ಪ್ರಶಾಂತದಾಸ ಆಗಿದ್ದಾರೆ. ಭಕ್ತಿ ಎನ್ನುವುದು ಸಾರ್ವಕಾಲಿಕ, ಸಾರ್ವದೇಶಿಕ. ಭಕ್ತಿಸಾಹಿತ್ಯ ಇನ್ನಷ್ಟು ರಚನೆ, ಪ್ರಚಾರ ಆಗಬೇಕು. ಒಂದು ಹಂತದಲ್ಲಿ ಮಾತ್ರ ಭೌತಿಕ ಜೀವನವು ಮೆರಗು ನೀಡುತ್ತದೆ. ಅಂತಿಮವಾಗಿ ನಮ್ಮ ಋಷಿಮುನಿಗಳ ಚಿಂತನೆಯೇ ನಿತ್ಯಸತ್ಯ. | ಸುಗುಣೇಂದ್ರ ಶ್ರೀ. ಪುತ್ತಿಗೆ ಮಠ, ಉಡುಪಿ