ಸುಬ್ರಹ್ಮಣ್ಯ: ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ಶುಕ್ರವಾರ ಸಂಪನ್ನಗೊಂಡಿತು. ಸಹಸ್ರಾರು ಭಕ್ತರು ಶ್ರೀ ದೈವದ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಬುಧವಾರ ಮೆರವಣಿಗೆ ಮೂಲಕ ಭಕ್ತರು ದೈವಸ್ಥಾನಕ್ಕೆ ಹಸಿರು ಕಾಣಿಕೆ ಸಮರ್ಪಿಸಿದರು. ಗುರುವಾರ ಬೆಳಗ್ಗೆ ಸ್ಥಳ ಶುದ್ಧೀಕರಣ, ಗಣಹೋಮ, ಸಂಜೆ ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವ ಕಾರ್ಯ ನೆರವೇರಿತು. ಭಂಡಾರದ ಮೆರವಣಿಗೆ ನಂತರ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಭಕ್ತರು ಮೇಲೇರಿಗೆ ಎಣ್ಣೆ ಸುರಿದು ಹರಕೆ ತೀರಿಸಿದರು. ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನೆರವೇರಿತು. ಯಕ್ಷಗಾನ ಪ್ರದರ್ಶನಗೊಂಡಿತು. ಶುಕ್ರವಾರ ಪ್ರಾತಃಕಾಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನೆರವೇರಿತು. ಮಾರಿಕಳ ಹಾಗೂ ಪ್ರಸಾದ ಸ್ವೀಕಾರ ಬಳಿಕ ಗುಳಿಗ ದೈವದ ನಡಾವಳಿ ಜರುಗಿತು.
ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಮೊಕ್ತೇಸರ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಜತೆ ಕಾರ್ಯದರ್ಶಿ ಮಿಥುನ್ ಪೈಕ, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ರೈ ಪೈಕ, ಕುಮಾರ ಆಚಾರ್ಯ ದೋಳ್ಪಾಡಿ, ಪ್ರದೀಪ್ ಬೊಬ್ಬಕೇರಿ, ಭವಿಷ್ ವಿಷ್ಣುಪುರ, ಪ್ರಮೋದ್ ವಿಷ್ಣುಪುರ, ಮೋಹನ್ ವಿಷ್ಣುಪುರ, ರಾಕೇಶ್ ವಿಷ್ಣುಪುರ, ರಾಜೇಶ್ ವಿಷ್ಣುಪುರ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.